ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶೇಷಚೇತನರು ತಾರತಮ್ಯವಿಲ್ಲದೇ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅದಕ್ಕೆ ಅವಶ್ಯಕವಾಗಿ ದೊರೆಯುವ ಕಾನೂನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಶುಭ ಕರೆ ನೀಡಿದ್ದಾರೆ.ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಸ್ವಸ್ಥ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಆರೈಕೆದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೆ.ಜಿ. ವಿಮಲಾ ಕಾರ್ಯಕ್ರಮದ ಆಶಯ ಮತ್ತು ಆರೈಕೆದಾರರ ಬಗ್ಗೆ ವಿಶ್ವ ಸಂಸ್ಥೆಯ ನಿಲುವು ವ್ಯಕ್ತಪಡಿಸಿದರು.ಸೋಮವಾರಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ ಅವರು ವಿಶೇಷಚೇತನರ ಪಾಲಕರ ಬವಣೆಗಳು ಮತ್ತು ಅವುಗಳ ಪರಿಹಾರ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ವಿಶೇಷಚೇತನ ಯುವಜನರ ಸಬಲೀಕರಣದಲ್ಲಿ ಬರುವ ಅಡೆತಡೆಗಳು, ಸಮಾಜದ ಸ್ಪಂದನೆ ಮತ್ತು ಜವಾಬ್ದಾರಿ, ಯೋಜನೆಗಳ ಸಾಫಲ್ಯತೆಗಳ ಬಗ್ಗೆ ತಿಳಿಸಿದರು.ಸುಂಟಿಕೊಪ್ಪದ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ್ ಮೈನಿ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಸೇರ್ಪಡೆಗೊಳಿಸುವ ಆಶಯ ವ್ಯಕ್ತಪಡಿಸಿದರು.
ಆಟಿಸಂ ಕುರಿತು ಕಾರ್ಯಾಗಾರ: ಮಕ್ಕಳ ಮನಃ ಶಾಸ್ತ್ರಜ್ಞ ರುಷಾಲಿ ಆಟಿಸಂ-ಸ್ವಲೀನತೆಯ ಆರಂಭಿಕ ಹಂತದಲ್ಲಿ ಗುರುತಿಸುವಿಕೆ ಮತ್ತು ನಿಭಾಯಿಸುವ ಕುರಿತು ಕಾರ್ಯಾಗಾರ ನಡೆಸಿದರು.ಸಾಮಾನ್ಯ ಶಾಲೆಗಳಲ್ಲಿ ಆಟಿಸಂ ಮಕ್ಕಳ ಏಕೀಕೃತ ಶಿಕ್ಷಣದ ಬಗ್ಗೆ ವನಿತಾ ಚೆಂಗಪ್ಪ, ಆಟಿಸಂ ಮಕ್ಕಳ ಜತೆಗಿನ ಅನುಭವಗಳ ಕುರಿತು ಮಂಜುಳಾ, ಫಿಸಿಯೋಥೆರಪಿಯ ಅನುಕೂಲಗಳ ಕುರಿತು ರಮಜೆ ಸಾಬ್ ನದಾಫ್, ವಿಶೇಷಚೇತನ ಮಕ್ಕಳ ದೃಶ್ಯಕಲೆ ಮತ್ತು ಕೌಶಲ್ಯ ತರಬೇತಿಯ ಕುರಿತು ರಾಮ್ ಗೌತಮ್ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿಶೇಷಚೇತನ ಮಕ್ಕಳ ಪಾಲಕರು, ಸರ್ಕಾರಿ ಶಾಲಾ ಶಿಕ್ಷಕಿಯರು ಮತ್ತು ಅಂಗನಾವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ಸ್ವಸ್ಥ ಸಂಸ್ಥೆಯ ವಿಶೇಷ ಶಿಕ್ಷಕ ಮಂಜುನಾಥ್ ಮತ್ತು ಲಲಿತಾ ನಿರೂಪಿಸಿದರು.