ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಮನುಷ್ಯನ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದೆ. ಒಂದು ವೇಳೆ ಮನುಷ್ಯ ಕಾನೂನು ಕೈಬಿಟ್ಟರೂ, ಕಾನೂನು ಮನುಷ್ಯನನ್ನು ಬಿಡುವುದಿಲ್ಲ ಎಂದು ಕಡೂರು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಇರ್ಪಾನ್ ತಿಳಿಸಿದರು.ಪಟ್ಟಣದ ಕ್ರಮುಕ ಆಂಗ್ಲ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕನ್ನಡ ಸಂಘ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಸಮಾಜದಲ್ಲಿ ಜೀವನ ನಡೆಸುತ್ತಿದ್ದೇವೆ.ಕೆಲ ನಿಯಮ, ರೀತಿ, ನೀತಿಗಳು ಸುಗಮ ಜೀವನಕ್ಕೆ ಬೇಕು. ಇತ್ತೀಚಿನ ದಿನಗಳಲ್ಲಿ ಹರಿಹರೆಯದ ಯುವಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಓಡಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸಿ ಬಾಲಾಪರಾಧಿಗಳ ಪಟ್ಟಿಗೆ ಸೇರುತ್ತಿದ್ದಾರೆ. ನಿಯಮ ಪಾಲನೆಗೆ ಒತ್ತು ನೀಡಬೇಕು ಎಂದರು.ಇಂದಿನ ಯುವ ಜನತೆ ಯಾವುದೇ ದುಶ್ಚಟಕ್ಕೆ ಒಳಗಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಈಗ ಸಣ್ಣ ಸಣ್ಣ ನಗರಗಳಲ್ಲೂ ಮಾದಕ ದ್ರವ್ಯಗಳ ಹಾವಳಿ ಜಾಸ್ತಿಯಾಗುತ್ತಿದೆ. ಮಾದಕ ವಸ್ತುಗಳ ಜಾಲಕ್ಕೆ ಶಾಲಾ ಮಕ್ಕಳೂ ಬಲಿಯಾಗುತ್ತಿರುವುದು ವಿಪರ್ಯಾಸ. ಇಂತಹ ಚಟಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಡೂರು ವಕೀಲರ ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ,ಅವುಗಳನ್ನು ಮೊದಲು ಅರಿಯಬೇಕು. ಮಹಿಳೆಯರಿಗಾಗಿ ವಿಶೇಷ ಕಾನೂನುಗಳು ರಚನೆಯಾಘಿದ್ದು,ಅವುಗಳ ಮಾಹಿತಿ ಪಡೆದಾಗ ಹಲ್ಲೆ, ಲೈಂಗಿಕ ಕಿರುಕುಳ, ದಂತಹ ಸಮಸ್ಯೆಗಳನ್ನು ತಡೆಯಲು ಮತ್ತು ಅವುಗಳ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥ ಗೌಡ ಮಾತನಾಡಿ, ಎಲ್ಲರೂ ಎಲ್ಲಾ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇದ್ದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇನೆ ನೆಮ್ಮದಿಯಿಂದಾ ಸಾಗಲು ಬೇಕಾಗುವ ಕಾನೂನುಗಳ ಅರಿವು ಪಡೆದುಕೊಳ್ಳಬೇಕು. ಸರ್ಕಾರ ಮಕ್ಕಳ ಅರಿವಿಗಾಗಿ ನ್ಯಾಯಧೀ ಶರ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಿರುವುದು ವಿದ್ಯಾರ್ಥಿಗಳಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿದರೆ ಮುಂದಾಗುವಂತಹ ಅನಾಹುಗಳನ್ನು ತಪ್ಪಿಸಿದಂತಾಗುತ್ತದೆ ಎಂದರು.
ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದಾ ಬಾಳಬಹುದು ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿವು ಪಡೆಯಬೇಕು, ಆಗ ಮಾತ್ರ ಅಪರಾಧಗಳ ಸಂಖಯೆ ಗಣನೀಯವಾಗಿ ಕಡಿಮೆಯಾಗುತ್ತದೆ.ಈ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣವಾಗಿ ದೇಶದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದರು.ಮುಖ್ಯಶಿಕ್ಷಕ ತಮ್ಮಣಪ್ಪ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.