ಧಾರವಾಡ:
ಮಕ್ಕಳು ಒಂದು ರಾಷ್ಟ್ರದ ದೊಡ್ಡ ಶಕ್ತಿಯಾಗಿದ್ದು, ಪ್ರತಿಯೊಂದು ಮಗುವನ್ನು ಗೌರವ ಮತ್ತು ಆದರದಿಂದ ಕಾಣಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಪೋಕ್ಸೊ ಸಮಿತಿಯ ಅಧ್ಯಕ್ಷ ಎಸ್. ಸುನಿಲದತ್ ಯಾದವ ಹೇಳಿದರು.ಇಲ್ಲಿಯ ವಾಲ್ಮಿಯಲ್ಲಿ ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿದ ಅವರು, ಮಕ್ಕಳಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ತರಬೇತಿ ಕಾರ್ಯಾಗಾರ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಸಮರ್ಪಕ ಅರಿವು ಮೂಡಿಸುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಹಕರಿಸಬೇಕು ಎಂದರು.
ಮಕ್ಕಳು, ಮಹಿಳೆಯರು ಮತ್ತು ಲೈಂಗಿಕ ಅಪರಾಧಗಳ ಸಂತ್ರಸ್ತರು, ವಿಕಲಚೇತನರು ಹಾಗೂ ಇತರ ಸಂವೇದನಾಶೀಲ ಸಾಕ್ಷಿಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ಸಂತ್ರಸ್ತರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸುವ ಜತೆಗೆ ಕಾನೂನು ನಡುವಳಿಯ ಗೌಪ್ಯತೆಯನ್ನು ಬೆಂಬಲ ವ್ಯಕ್ತಿಗಳು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಡಾ. ಸ್ನೇಹಾ ಸಿ.ವಿ. ಮಾತನಾಡಿ, 15 ಮತ್ತು 16 ವರ್ಷದ ವಯಸ್ಸಿನಲ್ಲೇ ಮಕ್ಕಳಿಗೆ ಮಗು ಜನಿಸುವಂತಹ ಪ್ರಕರಣಗಳಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಶಿಕ್ಷೆ ವಿಧಿಸಿದರೆ, ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಸಾಧ್ಯ. ಮಗುವಿನ ಭವಿಷ್ಯಕ್ಕೆ ಅಗತ್ಯವಾದ ಬೆಂಬಲ ಒದಗಿಸುವುದು ಸಹ ಮುಖ್ಯ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಮಕ್ಕಳ ಬಾಲ್ಯ, ಹಕ್ಕುಗಳು ಹಾಗೂ ರಕ್ಷಣೆಯ ಜವಾಬ್ದಾರಿ ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎನ್.ವಿ. ವಿಜಯ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಹ್ಮದಲಿ ತಹಶೀಲ್ದಾರ ನಿರೂಪಿಸಿದರು. ಅಲ್ಲಪ್ಪ ಬಡಿಗೇರ ವಂದಿಸಿದರು. ಕಾರ್ಯಾಗಾರದಲ್ಲಿ ಎಚ್. ಶಶಿಧರ ಶೆಟ್ಟಿ, ದೀಪಾ ಜಾವೂರ ಇದ್ದರು.