ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾನೂನಿನ ಅರಿವು ಅಗತ್ಯವಾಗಿದೆ ಎಂದು ಎ.ಎಸ್.ಎನ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪಲ್ಲವಿ ಅದಿತಿ ನಾಡಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾನೂನಿನ ಅರಿವು ಅಗತ್ಯವಾಗಿದೆ ಎಂದು ಎ.ಎಸ್.ಎನ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪಲ್ಲವಿ ಅದಿತಿ ನಾಡಗೌಡ ಹೇಳಿದರು.ಪಟ್ಟಣದ ಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಎ.ಎಸ್.ಎನ್.ಕಾನೂನು ಮಹಾವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಪದವಿ ಪ್ರಮಾಣಪತ್ರ ಪಡೆಯುವುದರಿಂದ ಪ್ರಯೋಜನವಿಲ್ಲ. ಪ್ರತಿದಿನ ಕಾಲೇಜಿಗೆ ಹಾಜರಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಮೌಲ್ಯ ದೊರೆಯುತ್ತದೆ ಎಂದರು.ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ನ್ಯಾಯಕ್ಕಾಗಿ ಕಾನೂನಿನ ಮಾರ್ಗದಲ್ಲಿ ಹೋರಾಡಿ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ವಕೀಲರ ಮೇಲಿದೆ, ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇವರು, ಸ್ವಾಮೀಜಿಗಳು ಹಾಗೂ ರಾಜಕಾರಣಿಗಳಿಂದ ಕಾನೂನು ಪ್ರಕ್ರಿಯೆಯ ಮೂಲಕ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜಕ್ಕೆ ನ್ಯಾಯ ಒದಗಿಸುವ ಮಹತ್ತರ ಸೇವೆಯಾಗಿದೆ. ಬಡವರು, ನಿರ್ಗತಿಕರು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ಧೈರ್ಯದಿಂದ ನಿಂತು ಅವರಿಗೆ ನ್ಯಾಯ ದೊರಕಿಸಿಕೊಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾನೂನಿನ ಜ್ಞಾನವನ್ನು ವೈಯಕ್ತಿಕ ಲಾಭಕ್ಕೆ ಮಾತ್ರ ಸೀಮಿತಗೊಳಿಸದೇ ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಸತ್ಯದ ಪರವಾಗಿ ನಿಂತು, ಅನ್ಯಾಯದ ವಿರುದ್ಧ ಹೋರಾಡುವ ಮೂಲಕ ವಕೀಲ ವೃತ್ತಿಯ ಘನತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿ ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕಮಲಕಿಶೋರ ಆರ್.ಜೋಶಿ ಮಾತನಾಡಿ, ಕಾನೂನು ಪದವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳು ಈ ಶಿಕ್ಷಣವನ್ನು ಕೇವಲ ಹಣ ಸಂಪಾದಿಸುವ ಉದ್ದೇಶಕ್ಕೆ ಸೀಮಿತಗೊಳಿಸದೇ ಸಮಾಜದ ಸುಧಾರಣೆ ಹಾಗೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಸೇವೆಗೆ ಬಳಸಿಕೊಳ್ಳಬೇಕು. ವಕೀಲ ವೃತ್ತಿಯಲ್ಲಿ ಅಪಾರ ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮ ಹಾಗೂ ವೃತ್ತಿಪರ ಕೌಶಲ ಬೆಳೆಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.ತಾವು ಕೂಡ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಇಂಗ್ಲಿಷ್ ಭಾಷೆ ಕಷ್ಟವೆಂದು ವಿದ್ಯಾರ್ಥಿಗಳು ಭಯಪಡಬಾರದು. ಪ್ರತಿದಿನ ಒಂದೊಂದು ಇಂಗ್ಲಿಷ್ ಪದವನ್ನು ಕಲಿತು ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ನಲ್ಲಿ ರೀಲ್ಸ್ ನೋಡುವ ಸಮಯದಲ್ಲಿ ಇಂಗ್ಲಿಷ್ ಪದಗಳ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಮುಖಂಡರಾದ ನಾನಾಸಾಹೇಬ ದೇಶಮುಖ, ಶಿವಪ್ಪ ತಾತರೆಡ್ಡಿ, ಎ.ಜಿ.ಗಂಗನಗೌಡರ, ಸಂಗಣ್ಣ ಪತ್ತಾರ ಸೇರಿದಂತೆ ಕಾಲೇಜಿನ ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.₹15 ಸಾವಿರ ವಿದ್ಯಾರ್ಥಿವೇತನ ವಿತರಿಸಿದ ಪಲ್ಲವಿ ನಾಡಗೌಡಪ್ರಥಮ ವರ್ಷದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಾಬಾ ಅವಟಿ ಹಾಗೂ ಶೀಲಾ ನಾಯಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷೆ ಪಲ್ಲವಿ ನಾಡಗೌಡ ಅವರು ಇಬ್ಬರು ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ವಿದ್ಯಾರ್ಥಿವೇತನ ವಿತರಿಸಿದರು. ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಗ್ರಾಮೀಣ ಪ್ರದೇಶದ ಯುವಕರು ಕಾನೂನು ಪದವಿ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬ ಉದ್ದೇಶದಿಂದ ನಾಲತವಾಡದಲ್ಲಿ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. ದೇಶದ ಅನೇಕ ಹೆಸರಾಂತ ವಕೀಲರು ಗ್ರಾಮೀಣ ಪ್ರದೇಶದಿಂದಲೇ ಬೆಳೆದು ಬಂದಿದ್ದಾರೆ. ವಿದ್ಯಾರ್ಥಿಗಳೂ ಅವರಂತೆ ಸಾಧನೆ ಮಾಡಬೇಕು ಎಂಬುವುದು ನಮ್ಮ ಆಶಯವಾಗಿದೆ.-ಪಲ್ಲವಿ ಅದಿತಿ ನಾಡಗೌಡ, ಎ.ಎಸ್.ಎನ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಕಾನೂನು ಪುಸ್ತಕಗಳ ಭಂಡಾರ ಸ್ಥಾಪಿಸಿ ಮಾದರಿ ಕಾಲೇಜನ್ನಾಗಿ ರೂಪಿಸಬೇಕೆಂಬುವುದು ಅಧ್ಯಕ್ಷೆ ಪಲ್ಲವಿ ನಾಡಗೌಡರ ಕನಸಾಗಿದೆ.-ಕಮಲಕಿಶೋರ ಆರ್.ಜೋಶಿ,
ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರು.