ಸಾರಾಂಶ
ತಾಲೂಕು ಪಂಚಾಯ್ತಿಯಲ್ಲಿ ವಿಧಾನ್ ಸೇ ಸಮಾಧಾನ್ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆ, ದೌರ್ಜನ್ಯ ಮತ್ತು ಕಿರುಕುಳಗಳನ್ನು ಹಿಮ್ಮೆಟ್ಟಿಸಲು ಮಹಿಳೆಯರಿಗೆ ಕಾನೂನಿನ ಸಾಕ್ಷರತೆ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಪಂಚಾಯಿತಿ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನ್ ಸೇ ಸಮಾಧಾನ್ ಮಹಿಳೆಯರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾಗಿ ಬಂದಿರುವ ಮಹಿಳೆಯರು, ಮಹಿಳೆಯರಿಗೆ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ತಿಳಿದು ಇತರರಿಗೂ ಅದನ್ನು ತಿಳಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿ ಕಾನೂನಿನ ಕುರಿತು ಮಾಹಿತಿ ಹೊಂದಬೇಕೆಂದು ಹೇಳಿದರು.ಸ್ವಾತಂತ್ರ್ಯ ನಂತರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾನೂನು ಜಾರಿಗೆ ತಂದರೂ ಅದರ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿ ಮೂಡಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಮಹಿಳೆಯರ ಮೇಲೆ ಮೌಢ್ಯ, ಅನಕ್ಷರತೆ ಹಾಗೂ ದೌರ್ಜನ್ಯ ಪ್ರಕರಣ ವರದಿಯಾಗುತ್ತಿವೆ. ಮಹಿಳೆ ಯರು ಇವುಗಳಿಂದ ಹೊರ ಬರಲು ಸಾಕ್ಷರತೆ ತುಂಬಾ ಅವಶ್ಯ. ಕಾನೂನು ಸೇವೆಗಳ ಪ್ರಾಧಿಕಾರ ಮಹಿಳೆಯರಿಗಾಗಿಯೇ ಉಚಿತ ಸೇವೆ ನೀಡುತ್ತಿದೆ. ಮಹಿಳೆಯರು ಅವುಗಳ ಬಳಕೆ ಮಾಡುವುದು ಮುಖ್ಯ. ಇದಕ್ಕೆ ಮಹಿಳೆಯರ ಮನಸ್ಥಿತಿಯೂ ಮುಖ್ಯ. ಸ್ವಯಂ ಆಲೋಚನೆಯಿಂದ ಹಕ್ಕುಗಳನ್ನು ಪಡೆಯಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ. ಮಹಿಳೆಯರಿಗೆ ವಿವಿಧ ಸ್ಥಾನಮಾನ ನೀಡಿದ್ದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ದೌರ್ಜನ್ಯಗಳಾಗದಂತೆ ತಡೆದಾಗ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯ ಎಂದರು.ಜಿಲ್ಲಾ ಪಂಚಾಯಿತಿಯಿಂದ ಅಬಲೆಯರಿಗೆ, ನೊಂದ ಹೆಣ್ಣು ಮಕ್ಕಳಿಗೆ ಮತ್ತು ಒಂಟಿಯಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಿಗೆ ವಿವಿಧ ಯೋಜನೆ ಜಾರಿಗೆ ತಂದಿದೆ. ಕುಟುಂಬದಿಂದ ನೊಂದು ಒಂಟಿಯಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಿಗೆ ಸಂಜೀವಿನಿ ಯೋಜನೆ ಯಂತಹ ವಿವಿಧ ಯೋಜನೆ ಜಾರಿಗೆ ತಂದಿದೆ. ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಬದುಕು ಕಟ್ಟಿಕೊಂಡು ಉತ್ತಮ ರೀತಿಯಲ್ಲಿ ಜೀವಿಸು ವಂತೆ ಸರ್ಕಾರ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ ಅದರ ಸದುಪಯೋಗ ಪಡೆಯುವಂತೆ ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ, ವಕೀಲರಾದ ಡಿ.ಎಸ್. ಮಮತಾ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಭಜಂತ್ರಿ, ವಕೀಲರ ಸಂಘ ಅಧ್ಯಕ್ಷ ಡಿ.ಬಿ. ಸುಜೇಂದ್ರ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ವೀರಭದ್ರಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋಷ್, ಜಿಲ್ಲಾ ಮಕ್ಕಳ ರಚನಾ ಘಟಕದ ಅಧಿಕಾರಿ ಲೋಕೇಶಪ್ಪ ಉಪಸ್ಥಿತರಿದ್ದರು. 8 ಕೆಸಿಕೆಎಂ 3ಚಿಕ್ಕಮಗಳೂರಿನ ತಾಲೂಕು ಪಂಚಾಯಿತಿ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಧಾನ್ ಸೇ ಸಮಾಧಾನ್ ಮಹಿಳೆಯರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ನ್ಯಾ. ವಿ. ಹನುಮಂತಪ್ಪ ಉದ್ಘಾಟಿಸಿದರು. ಜಿಪಂ ಸಿಇಒ ಕೀರ್ತನಾ, ರಂಗನಾಥ್, ಸುಜೇಂದ್ರ ಇದ್ದರು.