ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ ಉತ್ತಮ ಸಾರ್ವಜನಿಕ ಆಡಳಿತಕ್ಕಾಗಿ ಕಾನೂನುಗಳನ್ನು ಆರ್ಥೈಸಿಕೊಂಡು ಅನುಸರಿಸಿದರೆ, ಉತ್ತಮ ಸಮಾಜಕ್ಕೆ ನೆರವಾಗಲಿದೆ ಎಂದು ರಾಜ್ಯ ಉಪ ಲೋಕಾಯುಕ್ತರು, ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಹೇಳಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ನಡೆದ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಲೋಕಾಯುಕ್ತ ಸಂಸ್ಥೆ, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಅವಿನಾಭಾವ ಸಂಬಂಧ ವೃದ್ಧಿಸಲು ಶ್ರಮಿಸುತ್ತಿದೆ. ಸರ್ಕಾರದ ಧ್ಯೇಯೋದ್ದೇಶ ಈಡೇರಿಸಲು, ಉತ್ತಮ ಸಾರ್ವಜನಿಕ ಆಡಳಿತದ ದೆಸೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಭ್ರಷ್ಟಾಚಾರ ತಡೆಯಲು ಪ್ರತಿಯೊಬ್ಬರು ಪ್ರತಿನಿತ್ಯ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಅಸಮಾನತೆ ಮತ್ತು ಭ್ರಷ್ಟಾಚಾರ ಹೋಗಲಾಡಿಸಲು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಧ್ಯೇಯೋದ್ದೇಶಗಳ ಅನ್ವಯ, ಅರ್ಹ ವ್ಯಕ್ತಿಗೆ ಕಾನೂನುಬದ್ಧವಾಗಿ ಮತ್ತು ಸಕಾಲಕ್ಕೆ ಸವಲತ್ತು ದೊರೆಯುತ್ತಿದೆಯೇ ಎಂಬುವದರ ಬಗ್ಗೆ ಲೋಕಾಯುಕ್ತ ಸಂಸ್ಥೆಯು ನಿಗಾ ಇಡುವ ಜೊತೆಗೆ ಸೂಕ್ತ ಕ್ರಮ ಸಹ ಕೈಗೊಳ್ಳುತ್ತಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನೈಸರ್ಗಿಕ ಕಾನೂನು ತತ್ವಗಳ ಪಾಲನೆ ಅತಿಮುಖ್ಯವಾಗಿದ್ದು, ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.ಸಾರ್ವಜನಿಕರ ವೈಯಕ್ತಿಕ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಪ್ರಕರಣ ಮುಂದುವರೆಸಿಕೊಂಡು ಹೋಗಲು ಅಸಹಕಾರ ತೋರುವ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲು, ಲಂಚದ ವಿಷಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು, ಸುಳ್ಳು ದೂರುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದ್ದು, ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಪರಾಧಿಕ ಪ್ರಕರಣಗಳಲ್ಲಿ ಯುವ ಜನಾಂಗ ಕಂಡು ಬರುತ್ತಿದ್ದು, ಇದನ್ನು ಸರಿಪಡಿಸುವ ಕಾರ್ಯ ದೇಶದ ಜನಸಂಖ್ಯೆಯಲ್ಲಿ ಶೇ.1ರಷ್ಟು ಇರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಬೇಕು. ನಾಗರಿಕರ ಗೌರವಯುತ ಜೀವನಕ್ಕಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಕಾಯ್ದೆ, ಬಾಲ್ಯ ವಿವಾಹ ನಿರ್ಮೂಲನೆ ಕಾಯ್ದೆ, ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ಮತ್ತು ರಕ್ಷಣಾ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಉದಾಹರಣೆಗಳೊಂದಿಗೆ ಉತ್ತಮ ಆಡಳಿತದ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಅದರಂತೆ ಅಧಿಕಾರಿಗಳೊಂದಿಗೆ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ, ಬಿ.ಜಯಂತಕುಮಾರ್, ಪ್ರತಿ ಕ್ಷಣ ಒಳ್ಳೆಯ ಕೆಲಸಗಳ ಮೂಲಕ ಹಾಗೂ ಇನ್ನೊಬ್ಬರ ಗೌರವಯುತ ಜೀವನಕ್ಕೆ ಅನುವು ಮಾಡಿಕೊಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದರು. ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕ ಶಶಿಕಾಂತ ಭಾವಿಕಟ್ಟಿ, ಉಪ ನಿಬಂಧಕ ಚನ್ನಕೇಶವ ರೆಡ್ಡಿ ಎಂ.ವಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪ್ರಲ್ಹಾದ್ ರಾವ್ ಮುತಾಲಿಕ್ ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್.ಹೊನೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಇತರರಿದ್ದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುಭಾಶ್ ಚಂದ್ರ ಕೌಲಗಿ ನಿರೂಪಿಸಿದರು.