ಮಾದಕ ವಸ್ತು ಮಾರಾಟಗಾರರಿಗೆ ಶಾಸರ ಎಚ್ಚರಿಕೆ

| Published : Jan 17 2025, 12:48 AM IST

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಗಾಂಜಾ ಮಾಫಿಯ ಹೆಚ್ಚಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಗಾಂಜಾ ಮತ್ತು ಡ್ರಗ್ ಮಾಫಿಯಾಗೆ ಜಿಲ್ಲೆಯಲ್ಲಿ ಕಡಿವಾಣ ಹಾಕಲು ಪೊಲೀಸ್ ಮತ್ತು ಜಿಲ್ಲಾಡಳಿತ ನಿರ್ಧರಿಸಿದೆ. ಯಾರು ಸೇವನೆ ಮಾಡುತ್ತಾರೆ. ಅವರಿಗೆ ಎಲ್ಲಿ ಇದು ಸಿಗುತ್ತದೆ ಎಂಬುದನ್ನು ಪೋಲಿಸರು ಗುರ್ತಿಸಿದ್ದು, ಈಗಾಗಲೇ ಸೇವನೆ ಮಾಡುವವರನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪೊಲೀಸರು ಮತ್ತು ತಾವು ಮಾದಕವಸ್ತುಗಳ ಮಾರಾಟಗಾರರನ್ನು ಗುರ್ತಿಸಿದ್ದು, ಅವರನ್ನು ಹಿಡಿದೇ ಹಿಡಿಯುತ್ತೇವೆ. ಆರೋಪಿಗಳ ವಿರುದ್ಧ ಕೇಸ್‌ ಹಾಕಿದರೆ ಎರಡು ಮೂರು ವರ್ಷ ಬೇಲ್ ಸಿಗುವುದಿಲ್ಲಾ ಎಂದು ಚಿಕ್ಕಬಳ್ಳಾಪುರದ ಡ್ರಗ್ ಪೆಡ್ಲರ್ ಗಳಿಗೆ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದರು.

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಂಡಿಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡಿಕಲ್ , ಗುಂಡ್ಲು ಮಂಡಿಕಲ್ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ, ಅಹವಾಲುಗಳನ್ನು ಆಲಿಸಿ, ಕಾಕಲಚಿಂತೆ ಗ್ರಾಮದಲ್ಲಿ 90 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಚ್ಚುತ್ತಿರುವ ಗಾಂಜಾ ಮಾಫೀಯ

ಚಿಕ್ಕಬಳ್ಳಾಪುರದಲ್ಲಿ ಗಾಂಜಾ ಮಾಫಿಯ ಹೆಚ್ಚಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಗಾಂಜಾ ಮತ್ತು ಡ್ರಗ್ ಮಾಫಿಯಾಗೆ ಜಿಲ್ಲೆಯಲ್ಲಿ ಕಡಿವಾಣ ಹಾಕಲು ಪೊಲೀಸ್ ಮತ್ತು ಜಿಲ್ಲಾಡಳಿತ ನಿರ್ಧರಿಸಿದೆ. ಯಾರು ಸೇವನೆ ಮಾಡುತ್ತಾರೆ. ಅವರಿಗೆ ಎಲ್ಲಿ ಇದು ಸಿಗುತ್ತದೆ ಎಂಬುದನ್ನು ಪೋಲಿಸರು ಗುರ್ತಿಸಿದ್ದು, ಈಗಾಗಲೇ ಸೇವನೆ ಮಾಡುವವರನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದರು.

ಏಕೆಂದರೆ ಮಾದಕ ವಸ್ತು ಸೇವಿಸುವವರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಆಗಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಅವರಿಗೆ ಮತ್ತು ಪೋಷಕರಿಗೆ ತಿಳಿವಳಿಕೆ ನೀಡಿ, ಎಚ್ಚರಿಕೆ ನೀಡಲಾಗಿದೆ. ಅವರು ಮತ್ತೆ ಮಾದಕ ವಸ್ತುಗಳ ದಾಸರಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿಗೆ ಒತ್ತು

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಇದುವರೆಗೂ 110 ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ತೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇನೆ. ರಸ್ತೆಗಳು ಕ್ಷೇತ್ರದ ಅಭಿವೃದ್ಧಿಗೆ ಪೂರಕ. ಕ್ಷೇತ್ರದಲ್ಲಿನ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮ ನೈರ್ಮಲೀಕರಣ, ಹಸರೀಕರಣ, ಸೂಕ್ತ ಸಾರಿಗೆ ಸಂಪರ್ಕ, ರಸ್ತೆ ನಿರ್ಮಾಣ ಸೇರಿದಂತೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನ ಆಲಿಸಿ ಕುಂದು ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಶಾಸಕ ಪ್ರದೀಪ ಈಶ್ವರ ಸಿಸಿ ರಸ್ತೆಗಳ ಕಾಮಗಾರಿ ಗುಣಮಟ್ಟದಿಂದ ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ಮಾಡಬೇಕು ಎಂದು ತಾಕೀತು ಮಾಡಿದರು.

ಕ್ವಾರಿಗೆ ಅನುಮತಿ ನೀಡಿಲ್ಲ

ಮಂಡಿಕಲ್ , ಗುಂಡ್ಲು ಮಂಡಿಕಲ್ ಗ್ರಾಮಗಳಲ್ಲಿ ಅಲ್ಲಿನ ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ, ಆರೋಗ್ಯ ಸಮಸ್ಯೆ,ಸ್ಮಶಾನದ ಜಾಗದ ಸಮಸ್ಯೆ , ಸ್ಮಶಾನಕ್ಕೆ ತೆರಳುವ ರಸ್ತೆಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹರಿಸುವ ಭರವಸೆ ನೀಡಿದರು. ಗಣಿಗಾರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನನ್ನ 15 ತಿಂಗಳ ಆಡಳಿತದಲ್ಲಿ ಒಂದೇ ಒಂದು ಕ್ವಾರಿಗೂ ಅನುಮತಿ ನೀಡಿಲ್ಲ, ಗಣಿಗಾರಿಕೆ ನಿಲ್ಲಿಸಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳಾ, ಮುಖಂಡರಾದ ಅರವಿಂದ, ಅಡಗಲ್ ಶ್ರೀಧರ್, ಎಸ್.ಪಿ.ಶ್ರೀನಿವಾಸ್, ನಾಗಭೂಷಣ್, ಅರೂರು ಗ್ರಾಂ. ಪಂ. ಸದಸ್ಯ ಕಾಕಲಚಿಂತೆ ಮನೋಜ್ ಕುಮಾರ್, ತಿರುಮಲಪ್ಪ, ವೆಂಕಟೇಶ್, ಕುಪೇಂದ್ರ, ರೈತ ಸಂಘದ ರಾಜ್ಯಾಧ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ, ಬೊಮ್ಮನಹಳ್ಳಿ ಎಂಕೆಬಿ ಮುನಿಕೃಷ್ಣಪ್ಪ, ಕೆ. ವಿ.ಶ್ರೀಧರ್, ಕೆ.ಸಿ. ನಾರಾಯಣಸ್ವಾಮಿ, ನಾಗರಾಜ್, ಕೆ.ಸಿ.ಕೃಷ್ಣಪ್ಪ ಮತ್ತಿತರರು ಇದ್ದರು.