ಆನ್‌ಲೈನ್‌ ಆಹಾರ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ, ಝೊಮ್ಯಾಟೋದಂತಹ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ, ಕಡ್ಡಾಯವಾಗಿ ಕನ್ನಡ ಬಳಸುವಂತೆ ಕಾನೂನು ತರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆನ್‌ಲೈನ್‌ ಆಹಾರ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ, ಝೊಮ್ಯಾಟೋದಂತಹ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ, ಕಡ್ಡಾಯವಾಗಿ ಕನ್ನಡ ಬಳಸುವಂತೆ ಕಾನೂನು ತರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿದೆ.

ಸೋಮವಾರ ಈ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಎಸ್‌.ಲಾಡ್‌ ಅವರಿಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಿಗಿ, ಝೊಮ್ಯಾಟೋನಂತಹ ಸಂಸ್ಥೆಗಳು ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿವೆ. ಈ ಸಂಸ್ಥೆಗಳನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರ್ಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕಾದ ತುರ್ತು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಮನೆ ಮನೆಗೆ ಆಹಾರ ಸೇವೆ ಎನ್ನುವ ಆಧುನಿಕ ಸೇವಾ ವಲಯದಲ್ಲಿ ಕನ್ನಡ ಅವಗಣನೆಗೆ ಒಳಪಟ್ಟಿದೆ. ಈ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಅಂತೆಯೇ ಇಂತಹ ಸಂಸ್ಥೆಗಳ ಸೇವೆಗಳು ಕನ್ನಡಪರವಾಗಿ ಇರಬೇಕಾದುದು ಮುಖ್ಯವಾಗಿದೆ. ಇದಕ್ಕಾಗಿ ಸರ್ಕಾರವು ಉದ್ದೇಶಿಸಿರುವ ಸೇವಾ ಭದ್ರತಾ ಕಾಯ್ದೆಯಲ್ಲಿ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕಾಗಿದೆ.

ಈ ಸೇವಾ ವಲಯಗಳು ರಾಜ್ಯದ ಬೃಹತ್ ನಗರಗಳನ್ನು ದಾಟಿ ಜಿಲ್ಲಾ, ತಾಲೂಕು ಹಂತಗಳಿಗೆ ತಮ್ಮ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ. ಇವುಗಳ ಆನ್‌ಲೈನ್‌ ಸಹಾಯ ಕೇಂದ್ರಗಳಲ್ಲಿ ಕನ್ನಡ ಭಾಷೆಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಜೊತೆಗೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿಲ್ಲ. ಇದು ಒಂದು ರೀತಿಯಲ್ಲಿ ಆತಂಕಕಾರಿ ಸಂಗತಿಯಾಗಿದೆ. ಕಾನೂನಾತ್ಮಕವಾಗಿ ಸರ್ಕಾರವು ಆದ್ಯತೆಯ ಮೇರೆಗೆ ಈ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ವ್ಯಾಪಕವಾಗುವ, ಕನ್ನಡ ಭಾಷೆ ಅವಗಣನೆಗೆ ಒಳಗಾಗುವ ಎಲ್ಲ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.