ಸೋತಿದ್ದ ಸಹಕಾರ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ

| Published : Aug 22 2025, 01:00 AM IST

ಸೋತಿದ್ದ ಸಹಕಾರ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಪರಿಷತ್‌ನಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮರುಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ವಿಧಾನಪರಿಷತ್‌ನಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮರುಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು.

ವಿಧೇಯಕವನ್ನು ಪುನರ್‌ ಪರ್ಯಾಲೋಚಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ವಿಧಾನಸೌಧದಲ್ಲಿ ಅಂಗೀಕರಿಸಲಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಚರ್ಚೆಯಾಗಿ ಸೋಲಾಗಿದೆ. ಅದಕ್ಕಾಗಿ ಮರುಮಂಡನೆ ಮಾಡಲಾಗುತ್ತಿದೆ. ವಿಧಾನಪರಿಷತ್‌ನ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದು, ಅದನ್ನು ವಿಧೇಯಕದಡಿ ಜಾರಿ ಮಾಡಲಾಗುವುದು.

ಅದರಂತೆ ಮೂಲ ವಿಧೇಯಕದಲ್ಲಿ ಸಹಕಾರ ಸಂಘಗಳ ನಿರ್ದೇಶಕರು ಪ್ರತಿ ವರ್ಷ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿತ್ತು. ಇದೀಗ ಅದನ್ನು 2 ವರ್ಷಕ್ಕೆ ವಿಸ್ತರಿಸಲಾಗುವುದು. ಅದರ ಜತೆಗೆ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌, ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು ಎಂಬ ನಿಯಮವನ್ನು ಆರ್‌ಬಿಐ ಅನುಮೋದಿತ ಸಹಕಾರ ಸಂಸ್ಥೆಗಳಲ್ಲಿಡುವಂತೆ ಬದಲಿಸಲಾಗುವುದು. ಆದರೆ, 3 ವರ್ಷಕ್ಕೊಮ್ಮೆ ಸರ್ಕಾರದ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡುವ ಅಂಶ ಬದಲಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಧೇಯಕದಲ್ಲಿನ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಕೊನೆಗೆ ಧ್ವನಿಮತದ ಮೂಲಕ ವಿಧೇಯಕಕ್ಕೆ ಮತ್ತೊಮ್ಮೆ ಅನುಮೋದನೆ ನೀಡಲಾಯಿತು.

ಉಚ್ಚಾಟಿತ ಶಾಸಕರಿಂದ ಬೆಂಬಲ:

ವಿಧೇಯಕದ ಮೇಲಿನ ಚರ್ಚೆ ವೇಳೆ ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ವಿಧೇಯಕವನ್ನು ಸ್ವಾಗತಿಸಿದರು. ಎಸ್.ಟಿ. ಸೋಮಶೇಖರ್‌ ಮಾತನಾಡಿ, ಸೌಹಾರ್ದ ಸಹಕಾರ ಸಂಘಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ಹೀಗಾಗಿ ಸೌಹಾರ್ದ ಸಹಕಾರ ಸಂಘಗಳು ಠೇವಣಿದಾರರಿಗೆ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಗುರುರಾಘವೇಂದ್ರ ಸಹಕಾರ ಸಂಘ, ಕಣ್ವ, ವಸಿಷ್ಠ ಹೀಗೆ ಹಲವು ಸಹಕಾರ ಸಂಘಗಳು ಠೇವಣಿದಾರರಿಗೆ ಮೋಸ ಮಾಡಿದ್ದು, ಠೇವಣಿದಾರರು ಈಗ ಬೀದಿಗೆ ಬರುವಂತಾಗಿದೆ ಎಂದರು. ಶಿವರಾಂ ಹೆಬ್ಬಾರ್‌ ಕೂಡ ಅದೇ ದಾಟಿಯಲ್ಲಿ ಮಾತನಾಡಿದರು.