ವಿಧಾನ ಪರಿಷತ್ ಉಪಚುನಾವಣೆ: ಶೇ.97.91 ಮತದಾನ

| Published : Oct 22 2024, 12:02 AM IST

ಸಾರಾಂಶ

ದಕ್ಷಿಣ ಕನ್ನಡ- ಉಡುಪಿ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್‌ ಉಪಚುನಾವಣೆ ಸೋಮವಾರ ಎರಡೂ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ನೆರವೇರಿದ್ದು, ಶೇ.97.91 ಮತದಾನವಾಗಿದೆ. ಬಹುತೇಕ ಸ್ಥಳೀಯ ಸಂಸ್ಥೆ ಸದಸ್ಯರು, ಸಂಸದರು, ಶಾಸಕರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ- ಉಡುಪಿ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್‌ ಉಪಚುನಾವಣೆ ಸೋಮವಾರ ಎರಡೂ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ನೆರವೇರಿದ್ದು, ಶೇ.97.91 ಮತದಾನವಾಗಿದೆ. ಬಹುತೇಕ ಸ್ಥಳೀಯ ಸಂಸ್ಥೆ ಸದಸ್ಯರು, ಸಂಸದರು, ಶಾಸಕರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ದ.ಕ., ಉಡುಪಿ ಎರಡೂ ಜಿಲ್ಲೆಗಳು ಸೇರಿ ಒಟ್ಟು 6,032 ಮತದಾರರಿದ್ದು, ಅವರಲ್ಲಿ 5,906 ಮಂದಿ ಮತದಾನ ಮಾಡಿದ್ದಾರೆ. ಕ್ಷೇತ್ರದ 392 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಸಾಂಗವಾಗಿ ನಡೆಯಿತು.

ಅಭ್ಯರ್ಥಿಗಳ ಭವಿಷ್ಯ ಭದ್ರ:

ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳಾದ ಕಿಶೋರ್ ಕುಮಾರ್ (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್ (ಎಸ್‌ಡಿಪಿಐ) ಮತ್ತು ದಿನಕರ್ ಉಳ್ಳಾಲ್ (ಸ್ವತಂತ್ರ) ಅವರ ಭವಿಷ್ಯವನ್ನು ಮತದಾರರು ನಿರ್ಣಯಿಸಿದ್ದಾರೆ. ಅ.24ರಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆದು, ವಿಜೇತ ಅಭ್ಯರ್ಥಿಯ ಘೋಷಣೆ ನಡೆಯಲಿದೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿದೆ. ಗೆಲ್ಲುವ ಅಭ್ಯರ್ಥಿಯ ಅಧಿಕಾರವಧಿ 2028ರ ಜನವರಿವರೆಗೆ ಇರಲಿದೆ.

ಪ್ರಮುಖರ ಮತದಾನ:

ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು (ಉಳ್ಳಾಲ) ಶಾಸಕ ಯು.ಟಿ. ಖಾದರ್ ಅವರು ಉಳ್ಳಾಲ ನಗರಸಭೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಐವನ್ ಡಿಸೋಜ, ಮಂಜುನಾಥ್ ಭಂಡಾರಿ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಆದರೆ, ಯಾವುದೇ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮತ್ತು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದು, ಮತದಾನದ ಅವಕಾಶ ಕಳೆದುಕೊಂಡಿದ್ದಾರೆ.

ಬೆಳಗ್ಗೆಯೇ ಬಿರುಸಿನ ಮತದಾನ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, 223 ಗ್ರಾಪಂ, 2 ನಗರಸಭೆ, 3 ಪುರಸಭೆ, 5 ನಗರ ಪಂಚಾಯ್ತಿಯ ಬಹುತೇಕ ಸದಸ್ಯರು ಬೆಳಗ್ಗೆ 11 ಗಂಟೆಯೊಳಗೆ ಮತದಾನ ಮಾಡಿದ್ದು ವಿಶೇಷವಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಕಾರ್ಪೊರೇಟರ್‌ಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 11 ಗಂಟೆ ಬಳಿಕ ಮತಗಟ್ಟೆಗಳು ಬಹುತೇಕ ಖಾಲಿ ಹೊಡೆಯುತ್ತಿದ್ದವು. ಕೆಲವು ಮತಗಟ್ಟೆಗಳಲ್ಲಿ 12 ಗಂಟೆಯೊಳಗೆ ಎಲ್ಲ ಮತಗಳು ಚಲಾವಣೆಯಾದರೂ ಚುನಾವಣಾ ಸಿಬ್ಬಂದಿ ಸಂಜೆ 4 ಗಂಟೆವರೆಗೆ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು.

ವಿವಾಹಕ್ಕೆ ಮೊದಲು ಮತದಾನ:

ಕೊಕ್ಕಡ ಗ್ರಾಮ ಪಂಚಾಯಿತಿ ಸದಸ್ಯ ಶರತ್ ಎಂಬವರ ವಿವಾಹ ಮತದಾನ ದಿನವೇ ನಿಗದಿಯಾಗಿದ್ದು, ಮದುವೆ ಮಂಟಪಕ್ಕೆ ತೆರಳುವ ಮುನ್ನ ಕೊಕ್ಕಡ ಮತಗಟ್ಟೆಯಲ್ಲಿ ಮತದಾನ ಮಾಡಿ ಗಮನ ಸೆಳೆದರು.

53 ಸೂಕ್ಷ್ಮ ಮತಗಟ್ಟೆಗಳು:

ಕ್ಷೇತ್ರದಲ್ಲಿ 53 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಮತ್ತು ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. 20ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿತ್ತು. ಭದ್ರತೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 540 ಮತ್ತು ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಬಿಜೆಪಿ ಗೆಲುವು ಶತಸಿದ್ಧ:

ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಭರತ್ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಎಲ್ಸಿ ಹಾಗೂ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಎರಡೂ ಜಿಲ್ಲೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದರು........................

ತಾಲೂಕುವಾರು ಮತದಾನ ವಿವರ

ದಕ್ಷಿಣ ಕನ್ನಡ ಜಿಲ್ಲೆ

ಮೂಡುಬಿದಿರೆ- 100 %

ಮೂಲ್ಕಿ- 98.29 %

ಮಂಗಳೂರು- 98.33 %

ಉಳ್ಳಾಲ- 98.13 %

ಬಂಟ್ವಾಳ- 99.24 %

ಬೆಳ್ತಂಗಡಿ- 98.82 %

ಪುತ್ತೂರು- 99.20 %

ಸುಳ್ಯ- 97.67 %

ಕಡಬ- 99.65 %

--------

ಉಡುಪಿ ಜಿಲ್ಲೆ

ಬೈಂದೂರು- 88.80 %

ಕುಂದಾಪುರ- 93.59 %

ಬ್ರಹ್ಮಾವರ- 98.83 %

ಉಡುಪಿ- 99.18 %

ಕಾಪು- 97.77 %

ಹೆಬ್ರಿ- 99.18 %

ಕಾರ್ಕಳ- 99.28 %