ಸಾರಾಂಶ
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸೋಮವಾರ ನಡೆದ ಉಪ ಚುನಾವಣೆಗೆ ತಾಲೂಕಿನಾದ್ಯಂತ ಸ್ಥಳೀಯಾಡಳಿತಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಪುತ್ತೂರಿನಲ್ಲಿ ಶೇ. ೯೯.೭೩ ಮತದಾನವಾಗಿದೆ
ಕನ್ನಡಪ್ರಭ ವಾರ್ತೆ ಪುತ್ತೂರು
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸೋಮವಾರ ನಡೆದ ಉಪ ಚುನಾವಣೆಗೆ ತಾಲೂಕಿನಾದ್ಯಂತ ಸ್ಥಳೀಯಾಡಳಿತಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಪುತ್ತೂರಿನಲ್ಲಿ ಶೇ. ೯೯.೭೩ ಮತದಾನವಾಗಿದೆ. ಬೆಳಗ್ಗೆ ೮ ಗಂಟೆಯಿಂದಲೇ ಬಿರುಸಿನ ಮತದಾನ ನಡೆದು ಮಧ್ಯಾಹ್ನದ ಒಳಗಾಗಿ ಬಹುತೇಕ ಸ್ಥಳೀಯಾಡಳಿತಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.ಪುತ್ತೂರು ತಾಲೂಕಿನ ೨೨ ಗ್ರಾಮ ಪಂಚಾಯಿತಿ ಹಾಗೂ ೧ ನಗರಸಭೆ ಸೇರಿದಂತೆ ಒಟ್ಟು ೨೩ ಸ್ಥಳಿಯಾಡಳಿತದಲ್ಲಿ ಮತಗಟ್ಟೆಗಳನ್ನು ಮಾಡಲಾಗಿತ್ತು. ೧೮೨ ಪುರುಷ ಮತದಾರರು ಹಾಗೂ ೧೯೧ ಮಹಿಳಾ ಮತದಾರರು ಸೇರಿದಂತೆ ಒಟ್ಟು ೩೭೩ ಮತದಾರರು ಮತ ಚಲಾಯಿಸುವ ಅಧಿಕಾರ ಹೊಂದಿದ್ದರು. ಈ ಪೈಕಿ ಅರಿಯಡ್ಕ ಗ್ರಾಮ ಪಂಚಾಯಿತಿ ಹೊರತು ಪಡಿಸಿ ಉಳಿದ ಎಲ್ಲಾ ಮತಗಟ್ಟೆಗಳಲ್ಲಿ ಶೇ. ೧೦೦ ಮತದಾನವಾಗಿತ್ತು. ಅರಿಯಡ್ಕ ಗ್ರಾಪಂನಲ್ಲಿನ ೨೩ ಸದಸ್ಯರ ಪೈಕಿ ೨೨ ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅರಿಯಡ್ಕದಲ್ಲಿ ಮಹಿಳಾ ಸದಸ್ಯೆಯೋರ್ವರು ಅನಾರೋಗ್ಯದ ಕಾರಣದಿಂದಾಗಿ ಮತದಾನದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ. ಉಳಿದಂತೆ ತಾಲೂಕಿನ ೨೧ ಗ್ರಾಪಂ ಮತ್ತು ೧ ನಗರ ಸಭೆಯಲ್ಲಿನ ಎಲ್ಲಾ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದರು.
ಬಿಜೆಪಿ ಅಭ್ಯರ್ಥಿ ಕಿಶೋರ್ ಪುತ್ತೂರು ಅವರು ಬೆಳಗ್ಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಪಕ್ಷದ ಪ್ರಮುಖರೊಂದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿದರು.ವಾರದ ಸಂತೆ ಅಬಾಧಿತ:
ವಿಧಾನಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಯಾದ ನಗರಸಭಾ ಕಚೇರಿಯ ಪಕ್ಕದಲ್ಲಿರುವ ಕಿಲ್ಲೆ ಮೈದಾನದ ಸೋಮವಾರ ಸಂತೆ ನಡೆಯುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಅಧಿಕಾರಿಗಳು ಸಂತೆ ಇಲ್ಲ ಎಂದು ಪ್ರಕಟಣೆ ಹೊರಡಿಸಿದ ಬಳಿಕ ಶಾಸಕ ಅಶೋಕ್ ರೈ ಅವರು ಮಧ್ಯ ಪ್ರವೇಶಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಂತೆ ಯಥಾಸ್ಥಿತಿಯಲ್ಲಿರುವ ನಡೆಯುವಂತೆ ಮಾಡಿದ್ದರು. ಇದರಿಂದಾಗಿ ವಾರದ ಸಂತೆ ನಿರಾತಂಕವಾಗಿ ನಡೆಯಿತು.