ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಹಣ ಹಂಚಿಕೆ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಅತ್ಯಂತ ಖೇದಕರ. ಕ್ಷೇತ್ರ ಪ್ರತಿನಿಧಿಸುವ ಅಭ್ಯರ್ಥಿಗಳು ಸಹ ಹಣ ಕೊಟ್ಟು ಮತ ಹಾಕಿಸಿಕೊಂಡು ಆಯ್ಕೆಯಾಗುವುದು ನೋವಿನ ಸಂಗತಿ.
ಹುಬ್ಬಳ್ಳಿ:
ಪರಿಷತ್ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಫಾತಿಮಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಒಲವು ಯಾವ ಕಡೆ ಇದೆ ಎಂಬುದು ಈ ಚುನಾವಣೆಯಿಂದ ಗೊತ್ತಾಗಲಿದೆ ಎಂದರು.
ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಹಣ ಹಂಚಿಕೆ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಅತ್ಯಂತ ಖೇದಕರ. ಕ್ಷೇತ್ರ ಪ್ರತಿನಿಧಿಸುವ ಅಭ್ಯರ್ಥಿಗಳು ಸಹ ಹಣ ಕೊಟ್ಟು ಮತ ಹಾಕಿಸಿಕೊಂಡು ಆಯ್ಕೆಯಾಗುವುದು ನೋವಿನ ಸಂಗತಿ. ಶಿಕ್ಷಕರು ಇದರಿಂದ ದೂರ ಇದ್ದು, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು ಎಂದರು.ಈ ಮೊದಲು ವಿಧಾನಪರಿಷತ್ಗೆ ಮುತ್ಸದ್ಧಿಗಳು ಬರುತ್ತಿದ್ದರು. ಇತ್ತೀಚಿಗೆ ಅದು ವಿಧಾನಸಭೆಯ ಹಾಗೆಯೇ ಆಗಿದೆ ಎಂದು ಬೇಸರಿಸಿದ ಅವರು, ಪ್ರತಿ ಬಾರಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಸಂದರ್ಭ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಸರಿಯಲ್ಲ. ಒಂದು ಬಾರಿ ಪದವಿ ಪಡೆದವರು ಕೊನೆಯವರೆಗೂ ಪದವೀಧರರಾಗಿಯೇ ಇರುತ್ತಾರೆ. ಚುನಾವಣೆ ಸಂದರ್ಭ ಹೊಸದಾಗಿ ಸೇರ್ಪಡೆ ಹೆಸರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯಷ್ಟೇ ಇರಬೇಕು ಎಂದು ಹೇಳಿದರು.
ಪೆನ್ಡ್ರೈವ್ ಪ್ರಕರಣ ಸಿಬಿಐಗೆ ಒಪ್ಪಿಸಿ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಕೆಲವರು ವಿಡಿಯೋ ಮಾಡಿ, ಪೆನ್ಡ್ರೈವ್ ಮುಂದಿಟ್ಟುಕೊಂಡು ಹೆದರಿಸಿರಬಹುದು. ಅಥವಾ ಅದು ಎಐ ವಿಡಿಯೋ ಸಹ ಆಗಿರಬಹುದು. ಸಿದ್ದರಾಮಯ್ಯ ಶ್ರೇಷ್ಠ ರಾಜಕಾರಣಿ. ಇಂತಹ ಕೃತ್ಯ ರಾಜಕಾರಣಕ್ಕೆ ನಾಚಿಕೆ ತರುವಂತಹದ್ದಾಗಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಎಷ್ಟೇ ದೊಡ್ಡವರಾಗಿದ್ದರೂ ಜೈಲಿಗೆ ಹಾಕಬೇಕು ಎಂದು ಹೊರಟ್ಟಿ ಒತ್ತಾಯಿಸಿದರು.ಕೆಂಗಲ್ ಹನುಮಂತಯ್ಯ ಸಿಎಂ ಆಗಿದ್ದಾಗ ಬೆಂಗಳೂರು ವಿಧಾನಸೌಧ ಕಟ್ಟಿದ್ದರು, ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಆಡಳಿತ ವಿಕೇಂದ್ರೀಕರಣ ಮಾಡಿದರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಈಗಿನ ಸರ್ಕಾರ ಸ್ಟಿಂಗ್ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.