ಸಾರಾಂಶ
ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ । ಪ್ರಾಣೇಶ್ ಸ್ಥಾನಕ್ಕೆ ಕುತ್ತು ಸಾಧ್ಯತೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ 2021ರ ಡಿಸೆಂಬರ್ 10ರಂದು ನಡೆದಿದ್ದ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಫೆ. 28ಕ್ಕೆ ನಿಗದಿಯಾಗಿದೆ. ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ ನ ಎ.ವಿ. ಗಾಯತ್ರಿ ಶಾಂತೇಗೌಡ ವಿರುದ್ಧ ಆರು ಮತಗಳ ಅಂತರದಿಂದ ಗೆದ್ದಿದ್ದರು.
ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಗಾಯತ್ರಿ ಶಾಂತೇಗೌಡ ಸರ್ಕಾರದ ನಾಮ ನಿರ್ದೇಶಕ ಸದಸ್ಯರ 12 ಮತಗಳನ್ನು ಪರಿಗಣಿಸಬಾರದು ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನಾಮ ನಿರ್ದೇಶಕ ಸದಸ್ಯರ ಮತಗಳನ್ನು ಹೊರತುಪಡಿಸಿ ಮರುಮತ ಎಣಿಕೆ ಮಾಡುವಂತೆ ಆದೇಶ ಮಾಡಿತ್ತು.ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಸಹ 2025 ಮಾರ್ಚ್ 4 ಒಳಗಾಗಿ ನಾಮ ನಿರ್ದೇಶಕ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಮತ ಎಣಿಕೆ ನಡೆಸುವಂತೆ ಆದೇಶಿಸಿತ್ತು.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಫೆ. 28ಕ್ಕೆ ಮರು ಮತ ಎಣಿಕೆಗೆ ದಿನ ನಿಗದಿಗೊಳಿಸಿದ್ದಾರೆ.ಫೆ. 28 ರಂದು ಬೆಳಗ್ಗೆ 8 ಗಂಟೆಗೆ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಮರು ಮತ ಎಣಿಕೆ ನಡೆಯಲಿದೆ. ಮರು ಮತ ಎಣಿಕೆ ಬಳಿಕ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಕುರಿತು ಈಗಾಗಲೇ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಹಾಗೂ ಕಾಂಗ್ರೆಸ್ ನ ಗಾಯತ್ರಿ ಶಾಂತೇಗೌಡ ಅವರಿಗೆ ನೋಟಿಸ್ ನೀಡಲಾಗಿದೆ. ಮರು ಮತ ಎಣಿಕೆ ಸಂದರ್ಭದಲ್ಲಿ ಬಿಗಿ ಬಂದೊ ಬಸ್ತ್ ಮಾಡಿಕೊಳ್ಳುವುದಾಗಿ ಎಡಿಸಿ ತಿಳಿಸಿದ್ದಾರೆ.ಪ್ರಾಣೇಶ್ ಸ್ಥಾನಕ್ಕೆ ಕುತ್ತು ಸಾಧ್ಯತೆ:ಕಳೆದ ಮೂರು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಕೆ.ಪ್ರಾಣೇಶ್ ಅವರು ಮರು ಮತ ಎಣಿಕೆ ಬಳಿಕ ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಪ್ರಾಣೇಶ್ ಕೇವಲ ಆರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಸರ್ಕಾರದ ನಾಮ ನಿರ್ದೇಶಿತ ಸದಸ್ಯರ 12 ಮತಗಳನ್ನು ಹೊರತು ಪಡಿಸಿ ಮರುಮತ ಎಣಿಕೆ ನಡೆಸಿದರೆ ಗಾಯತ್ರಿ ಶಾಂತೇಗೌಡ ಅವರೇ ಹೆಚ್ಚು ಮತ ಪಡೆದು ಗೆಲುವು ಸಾಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.-- ಬಾಕ್ಸ್---
ಮರು ಮತ ಎಣಿಕೆಗೆ ಆದೇಶಿರುವ ನ್ಯಾಯಾಲಯಗಳ ತೀರ್ಪನ್ನು ಸ್ವಾಗತಿಸುತ್ತೇನೆ. ಸತ್ಯಕ್ಕೆ ಎಂದಿದ್ದರು ಜಯ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಮರು ಮತ ಎಣಿಕೆಗೆ ಆದೇಶ ನೀಡಿರುವುದೇ ಸಾಕ್ಷಿಯಾಗಿದೆ. ಮರು ಮತ ಎಣಿಕೆಯಲ್ಲಿ ನಾನು ಗೆದ್ದೇ ಗೆಲ್ಲುವ ವಿಶ್ವಾಸವಿದೆ.- ಗಾಯತ್ರಿ ಶಾಂತೇಗೌಡ