ಸರ್ಕಾರ ಕೊಟ್ಟ ಮಾತಿನಂತೆ ಒಳ ಮೀಸಲಾತಿ ಕಲ್ಪಿಸಲಿದೆ

| Published : Jul 26 2025, 12:00 AM IST

ಸರ್ಕಾರ ಕೊಟ್ಟ ಮಾತಿನಂತೆ ಒಳ ಮೀಸಲಾತಿ ಕಲ್ಪಿಸಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಆ.1 ಮತ್ತು 16 ರಂದು ಬಿಜೆಪಿ ಬೆಂಬಲಿತ ನಾಯಕರು ನಡೆಸುತ್ತಿರುವ ಹೋರಾಟ ಸಮುದಾಯದ್ದಲ್ಲ. ಅದೊಂದು ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಲಾಭಗಳಿಸಲು ಕುತಂತ್ರ

- ಬಿಜೆಪಿ ಪ್ರೇರಿತ ಹೋರಾಟ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಹುನ್ನಾರ

- ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಆರೋಪ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಕೊಡಲು ನ್ಯಾ.ಎಚ್.ಎನ್. ನಾಗಮೋಹನ್‌ ದಾಸ್ ವರದಿಗಾಗಿ ಕಾಯುತ್ತಿದ್ದರೂ, ಬಿಜೆಪಿ ಬೆಂಬಲಿತ ರಾಜಕೀಯ ಪ್ರೇರಿತ ಹೋರಾಟ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಆರೋಪಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.1 ಮತ್ತು 16 ರಂದು ಬಿಜೆಪಿ ಬೆಂಬಲಿತ ನಾಯಕರು ನಡೆಸುತ್ತಿರುವ ಹೋರಾಟ ಸಮುದಾಯದ್ದಲ್ಲ. ಅದೊಂದು ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಲಾಭಗಳಿಸಲು ಕುತಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಮೀಸಲಾತಿ ವರ್ಗೀಕರಣ ಮಾಡಲು ಅಂದಿನ ಕಾಂಗ್ರೆಸ್ ಸರ್ಕಾರವು ನ್ಯಾ.ಎ.ಜೆ. ಸದಾಶಿವ ಆಯೋಗವನ್ನು ರಚಿಸಿತ್ತು. ವರದಿ ಕೊಡುವಾಗ ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಆದರೆ, ಅಂದು ಒಳ ಮೀಸಲಾತಿ ಜಾರಿ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಲ್ಲದೆ, ಆ ವರದಿಯನ್ನು ಮೂಲೆಗುಂಪು ಮಾಡಿ, ಮಾಧುಸ್ವಾಮಿ ನೇತೃತ್ವದಲ್ಲಿ ಉಪ ಸಮಿತಿ ರಚಿಸಿ ಸಂಪುಟ ಸಭೆ ಅಥವಾ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸದೆ ಒಳ ಮೀಸಲಾತಿ ಜಾರಿ ಮಾಡುವ ನಾಟಕ ಮಾಡಿತ್ತು ಎಂದು ಅವರು ದೂರಿದರು.

ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಎ. ನಾರಾಯಣಸ್ವಾಮಿ ಅವರು ಒಳ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದಿದ್ದರು. ಈಗ ಯಾವ ಮುಖ ಹೊತ್ತುಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಿ ಎನ್ನುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಎಂ. ಕಾರಜೋಳ ಅವರು ಬಿಜೆಪಿ ಸರ್ಕಾರ ಇದ್ದಾಗ ಒತ್ತಾಯ ಮಾಡಲೇ ಇಲ್ಲ. ಒಂದು ಹೇಳಿಕೆಯನ್ನು ಕೊಡಲಿಲ್ಲ. ಪ್ರಚಾರದ ಗೀಳಿಗೆ ಮತ್ತು ಅದನ್ನೇ ಕಸುಬನ್ನಾಗಿಸಿಕೊಂಡಿರುವ ಈ ಇಬ್ಬರೂ ನಾಯಕರು ಆ.1 ರಂದು ಪ್ರತಿಭಟನೆ ಮಾಡುತ್ತೇವೆಂದು ನೀಡಿರುವ ಹೇಳಿಕೆ ನಾಚಿಕೆಗೇಡು. ಹೋರಾಟ ಮಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಮಾತಿನಂತೆ ನ್ಯಾ.ಎಚ್.ಎನ್. ನಾಗಮೋಹನ್‌ ದಾಸ ವರದಿಯ ನಿರೀಕ್ಷೆಯಲ್ಲಿದ್ದಾರೆ. ವರದಿ ಸಲ್ಲಿಕೆಯಾದ 15 ದಿನಗಳೊಳಗೆ ಜಾರಿಗೆ ತರುವುದು ನಿಶ್ಚಿತ. ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮೊದಲಾದ ಮಾನದಂಡಗಳ ಆಧಾರದಲ್ಲಿ ದತ್ತಾಂಶ ಸಂಗ್ರಹ ಮಾಡುವ ಕಾರ್ಯ ಅಂತಿಮ ಹಂತದಲ್ಲಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಒಳ ಮೀಸಲಾತಿ ಕಲ್ಪಿಸುವುದು ಗ್ಯಾರಂಟಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾಸ್ಕರ್ ಪ್ರಸಾದ್ ಯಾರೆಂಬುದು ಗೊತ್ತಿಲ್ಲ. ಈತನಕ ಎಲ್ಲಿದ್ದರು? ಏನಾಗಿದ್ದರು? ಸಮಾಜದ ಬಗ್ಗೆ ಅವರು ಏನು ಮಾಡಿದ್ದಾರೆ. ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನಡೆಯುತ್ತಿರುವ ಹೋರಾಟಕ್ಕೆ ಸಮುದಾಯದ ಜನರು ಮನ್ನಣೆ ನೀಡಬಾರದು ಎಂದು ಅವರು ಮನವಿ ಮಾಡಿದರು.

ಮಾಜಿ ಮೇಯರ್ ನಾರಾಯಣ, ತಾಪಂ ಮಾಜಿ ಅಧ್ಯಕ್ಷ ಮರಯ್ಯ, ಆದಿಜಾಂಬವ ಮಹಾಸಭಾ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಎಡತೊರೆ ನಿಂಗರಾಜು, ಜಿಲ್ಲಾಧ್ಯಕ್ಷ ಎಂ. ಶಿವಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹುಣಸೂರು ಬಸವಣ್ಣ ಇದ್ದರು.