ಭಾಷ್ಯಾಕಾರ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ:ಎಚ್. ವಿಶ್ವನಾಥ್

| Published : May 22 2024, 12:51 AM IST

ಭಾಷ್ಯಾಕಾರ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ:ಎಚ್. ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮೂರಿನ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ಶ್ರೀ ಧನುರ್ ದಾಸ್ ರಾಮಾನುಜ ಜೀರ್ ಸ್ವಾಮೀಜಿ ಅವರು ತಮಿಳುನಾಡಿನಿಂದ ಇಲ್ಲಿಗೆ ಬಂದು ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ತೊರೆದು ದೇವಸ್ಥಾನದ ಸಂರಕ್ಷಣೆಯೊಂದಿಗೆ ಈ ದೇವಸ್ಥಾನದ ಸತ್ಯ ಕಥೆಯನ್ನು ನಮಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಪಟ್ಟಣದ ಶ್ರೀ ಭಾಷ್ಯಾಕಾರ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಪಟ್ಟಣದಲ್ಲಿರುವ ಶ್ರೀ ಭಾಷ್ಯಾಕಾರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ನಾನು ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ಅಕ್ಷರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ನೀಡುತ್ತಿದ್ದು, ಈಗ ಈ ದೇವಸ್ಥಾನಕ್ಕೆ ನೀಡುವ ಮೂಲಕ ಇಲ್ಲಿನ ಅಕ್ಷರ ಧಾಮಕ್ಕೆ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಮುಂದಿನ ದಿನಗಳಲ್ಲಿ ದೊಡ್ಡದಾದ ಅಕ್ಷರಧಾಮ ರೂಪುಗೊಳ್ಳಲಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದಿಂದಲೂ ನೆರವು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.

ಈ ದೇವಸ್ಥಾನಕ್ಕೆ ರಾಮಾನುಜಾಚಾರ್ಯರು ಬಂದು ಹೋಗಿದ್ದು, ಅವರ ಪಾದದ ಹೆಗ್ಗುರುತು ಇಲ್ಲಿದೆ. ಇಡೀ ಪ್ರಪಂಚದಲ್ಲಿಯೇ ಇಂತಹ ದೇವಸ್ಥಾನ ಇರುವುದು ಸಾಲಿಗ್ರಾಮದಲ್ಲಿ ಮಾತ್ರ, ಅದು ನಮ್ಮಗಳ ಸೌಭಾಗ್ಯವೆಂದರು.

ನಮ್ಮೂರಿನ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ಶ್ರೀ ಧನುರ್ ದಾಸ್ ರಾಮಾನುಜ ಜೀರ್ ಸ್ವಾಮೀಜಿ ಅವರು ತಮಿಳುನಾಡಿನಿಂದ ಇಲ್ಲಿಗೆ ಬಂದು ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ತೊರೆದು ದೇವಸ್ಥಾನದ ಸಂರಕ್ಷಣೆಯೊಂದಿಗೆ ಈ ದೇವಸ್ಥಾನದ ಸತ್ಯ ಕಥೆಯನ್ನು ನಮಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ, ಇವರ ಕಾರ್ಯ ಮೆಚ್ಚುವಂತದ್ದು ಎಂದರು.

ಈ ಮೂಲಕ ನಮ್ಮನ್ನು ಜಾಗೃತ ಮಾಡುತ್ತಿರುವ ಮತ್ತು ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಉತ್ತಮ ಕಾರ್ಯ ಮಾಡುವವರಿಗೆ ಸರ್ವರು ಸಹಕಾರ ನೀಡುವ ಮೂಲಕ ದೇವಾಲಯವು ಸಮಗ್ರ ಅಭಿವೃದ್ಧಿಯಾಗಿ ನಮ್ಮೂರಿನ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಈ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಸರ್ವರು ಸಹಕಾರವನ್ನು ನೀಡಬೇಕು ಎಂದು ಅವರು ತಿಳಿಸಿದರು.

ಶ್ರೀ ಧನುರ್ ದಾಸ್ ರಾಮಾನುಜ ಜೀರ್ ಸ್ವಾಮೀಜಿ, ಮುಖಂಡರಾದ ಎಸ್.ಪಿ. ಆನಂದ್, ಶ್ರೀನಿವಾಸ, ಎಲ್.ಐಸಿ ಭಾಸ್ಕರ್, ಅನಿಲ್, ಮಂಜುನಾಥ, ಮಹೇಶ್ ಇದ್ದರು.