ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಜಿಲ್ಲೆಯ 80 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಜಿಲ್ಲೆಯ 80 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 5 ಜಿಲ್ಲೆಗಳನ್ನೊಳಗೊಂಡಿರುವ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಎಲ್ಲಾ ಮತಗಟ್ಟೆಗಳಲ್ಲೂ ಬೆಳಗ್ಗೆ 8ಗಂಟೆಯಿಂದಲೇ ಮತದಾನ ಆರಂಭವಾಗಿ, ಪದವೀಧರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು.
ತುಮಕೂರು ಜಿಲ್ಲೆಯಲ್ಲಿ 28,720 ಪುರುಷ ಹಾಗೂ 21,340 ಮಹಿಳಾ ಮತದಾರರು ಸೇರಿ ಒಟ್ಟು 50,060 ಮತದಾರರಿದ್ದು, ಈ ಪದವೀಧರ ಮತದಾರರು ಅತ್ಯುತ್ಸಾಹದಿಂದಲೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು. ಹಾಗೆಯೇ ಇದೇ ಮೊದಲ ಬಾರಿಗೆ ಮತ ಪಟ್ಟಿಗೆ ಸೇರಿರುವ ಯುವ ಪದವೀಧರ ಮತದಾರರ ಉಲ್ಲಾಸ, ಉತ್ಸಾಹ ಹೇಳತೀರದಾಗಿತ್ತು.ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳಲ್ಲಿ ಸ್ಥಾಪಿಸಲಾಗಿರುವ ಒಟ್ಟು 80 ಮತಗಟ್ಟೆಗಳ ಸಮೀಪ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪೆಂಡಾಲ್ಗಳನ್ನು ಹಾಕಿಕೊಂಡು ಕುಳಿತು ತಮ್ಮ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ಮನವಿ ಮಾಡುತ್ತಿದ್ದರು.
ಅಲ್ಲದೆ ಮತದಾರರಿಗೆ ಅವರ ಮತ ಗುರುತಿನ ಚೀಟಿಯ ಸಂಖ್ಯೆ ಬರೆದುಕೊಟ್ಟು, ಯಾವ ರೀತಿ ಮತದಾನ ಮಾಡಬೇಕು ಎಂಬುದರ ಬಗ್ಗೆಯೂ ಅರಿವು ಮೂಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ನಗರದ ಕೋತಿತೋಪು ರಸ್ತೆಯಲ್ಲಿರುವ ಸಿದ್ದಗಂಗಾ ಹೈಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಬಿ.ಎಚ್. ರಸ್ತೆಯಲ್ಲಿರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ನಿಂದ ಶಶಿಹುಲಿಕುಂಟೆ ಮಠ್, ಎನ್ಡಿಎ ಅಭ್ಯರ್ಥಿಯಾಗಿ ಕೆ.ಎಂ. ಸುರೇಶ್ ಸೇರಿದಂತೆ 10 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಎಲ್ಲ ಅಭ್ಯರ್ಥಿಗಳ ಹಣೆ ಬರಹವನ್ನು ಪದವೀಧರ ಮತದಾರರು ಬರೆದಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ವಿಜಯದ ಮಾಲೆಯನ್ನು ಮತದಾರ ಯಾರ ಕೊರಳಿಗೆ ಹಾಕುತ್ತಾನೆ ಎಂಬುದು ಮತ ಎಣಿಕೆಯ ನಂತರ ಬಹಿರಂಗವಾಗಲಿದೆ.ಜಿಲ್ಲೆಯಲ್ಲಿ ಸ್ಥಾಪಿಸಿರುವ 80 ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.