ನಾಳೆ ಯದುವೀರ್‌ ಮೆರವಣಿಗೆಯಲ್ಲಿ ಸಾಗಿ ಮತ್ತೊಂದು ಬಾರಿ ನಾಮಪತ್ರ

| Published : Apr 02 2024, 01:00 AM IST

ಸಾರಾಂಶ

ಮೈಸೂರು-ಕೊಡಗು ಲೋಕಸಭಾ ಚುನಾವಣೆ ವಿಶೇಷವಾಗಿದೆ. ಬಿಜೆಪಿ- ಜೆಡಿಎಸ್‌‍ ಜೊತೆಗೆ ಪಕ್ಷಾತೀತವಾಗಿ ಯದುವೀರ್‌ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ರಾಜವಂಶಸ್ಥರ ಕೊಡುಗೆಗಳು ದೇಶಕ್ಕೆ ಮಾದರಿಯಾಗಿದ್ದು, ಯುವಕರು-ಹಿರಿಯರು ಇಂದಿಗೂ ನೆನೆಯುತ್ತಾರೆ. ಹೀಗಾಗಿ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ವೃದ್ಧರು, ಹಿರಿಯರು, ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಜನ ಪಾಲ್ಗೊಳ್ಳಲು ಶಾಸಕ ಜಿ.ಟಿ. ದೇವೇಗೌಡ ಮನವಿಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರು ಏ. 3ರಂದು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಮನವಿ ಮಾಡಿದರು.ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಏ. 3 ರಂದು ಜೆಡಿಎಸ್‌‍-ಬಿಜೆಪಿ ಕಾರ್ಯಕರ್ತರ ಸಮುಖದಲ್ಲಿ ನಾಮಪತ್ರ ಸಲ್ಲಿಸುವರು. ಅಂದು ಬೆಳಗ್ಗೆ 10.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಹೀಗಾಗಿ ಬಿಜೆಪಿ- ಜೆಡಿಎಸ್‌‍ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರು-ಕೊಡಗು ಲೋಕಸಭಾ ಚುನಾವಣೆ ವಿಶೇಷವಾಗಿದೆ. ಬಿಜೆಪಿ- ಜೆಡಿಎಸ್‌‍ ಜೊತೆಗೆ ಪಕ್ಷಾತೀತವಾಗಿ ಯದುವೀರ್‌ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ರಾಜವಂಶಸ್ಥರ ಕೊಡುಗೆಗಳು ದೇಶಕ್ಕೆ ಮಾದರಿಯಾಗಿದ್ದು, ಯುವಕರು-ಹಿರಿಯರು ಇಂದಿಗೂ ನೆನೆಯುತ್ತಾರೆ. ಹೀಗಾಗಿ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ವೃದ್ಧರು, ಹಿರಿಯರು, ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಮತ್ತು ಬರಗಾಲಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಜನತೆಗೆ ತಿಳಿದಿದೆ ಎಂದು ಅವರು ಹೇಳಿದರು.

ಅಭ್ಯರ್ಥಿ ಯದುವೀರ್‌ ಮಾತನಾಡಿ, ಮೈಸೂರ- ಕೊಡಗು ಕೃಷಿ ಮತ್ತು ಪ್ರವಾಸೋದ್ಯಮ ಅವಲಂಬಿಸಿದ್ದು, ಈ ಎರಡನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಎರಡು ಜಿಲ್ಲೆಗಳ ಪಾರಂಪರಿಕತೆಯನ್ನು ಉಳಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುವೆ. ತಂಬಾಕು, ಕಾಫಿ, ಭತ್ತ, ಹೊಗೆ ಸೊಪ್ಪು ಬೆಳೆಗೆ ಪ್ರೋತ್ಸಾಹ ನೀಡುತ್ತೇನೆ ಎಂದರು.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರು ಮೊದಲಿನಿಂದಲೂ ಜೊತೆಗೆ ಇದ್ದಾರೆ. ಆದರೆ, ಸದ್ಯಕ್ಕೆ ಅವರು ಎಲ್ಲಿಯೂ ಪ್ರಚಾರಕ್ಕೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮೊಡನೆ ಸೇರಿಕೊಳ್ಳುವರು ಎಂದು ಅವರು ಹೇಳಿದರು.

ಬಿಜೆಪಿ ಸೇರುವಂತೆ ಮೊದಲಿಂದಲೂ ಚೆರ್ಚಿಸುತ್ತಿದ್ದರು. ಮಾ. 13ರಂದು ಬಿಜೆಪಿ ಸೇರ್ಪಡೆಗೆ ಅಧಿಕೃತವಾಗಿ ಸೂಚನೆ ಬಂದಿತು. ಈಗ ಬಿಜೆಪಿ ಅಭ್ಯರ್ಥಿ ಮತ್ತು ರಾಜವಂಶಸ್ಥ ಎಂಬ ಎರಡೂ ಕಾರಣಕ್ಕೂ ಪ್ರಚಾರಕ್ಕೆ ಹೋದ ಎಲ್ಲಾ ಕಡೆಗಳಲ್ಲಿಯೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಬೇರೆ ಕಡೆ ಕಚೇರಿ ತೆರೆದಿದ್ದೇನೆ ಹೊರತು, ನಾನು ಯಾರನ್ನು ಅರಮನೆಗೆ ಬರಬೇಡಿ ಎಂದು ಹೇಳಿಲ್ಲ. ಅರಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ಸಹ ಜನರಿಗೆ ಸ್ಪಂದಿಸುತ್ತೇನೆ, ನನಗೂ ಜನರು ಕರೆ ಮಾಡಬಹುದು ಎಂದು ಯದುವೀರ್‌ ಸ್ಪಷ್ಟಪಡಿಸಿದರು.

ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು 2047 ವಿಕಾಸಿತ ಭಾರತದ ದೂರ ದೃಷ್ಟಿಯ ಚಿಂತನೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಬಿಜೆಪಿಯ ಹಿರಿಯ ವಿ. ಶ್ರೀನಿವಾಸ್‌‍ ಪ್ರಸಾದ್‌ ಅವರು ಬಿಜೆಪಿಯಲ್ಲಿ ಇದ್ದಾರೆ. ಅವರ ಅನುಭವ ಪಡೆಯುತ್ತೇನೆ. ಜೊತೆಗೆ ಅಡಗೂರು ಎಚ್‌. ವಿಶ್ವನಾಥ್‌ ಅವರು ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಮೇಯರ್‌ ಶಿವಕುಮಾರ್‌, ನಗರ ಪ್ರಧಾನ ಕಾರ್ಯದರ್ಶಿ ಮಹೇಶ್ ಕೇಬಲ್, ಗಿರೀಧರ್, ಬಿ.ಎಂ. ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮಡವಾಡಿ, ಕಿರಣ್ ಜಯರಾಮೇಗೌಡ, ವಸಂತ್ ಕುಮಾರ್ ಮೊದಲಾದವರು ಇದ್ದರು.

ಬಿ ಫಾರಂ ಹಸ್ತಾಂತರ

ಬಿಜೆಪಿಯು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರಿಗೆ ಸೋಮವಾರ ಪಕ್ಷದ ವತಿಯಿಂದ ಬಿ ಫಾರಂ ಪ್ರತಿಯನ್ನು ಹಸ್ತಾಂತರಿಸಲಾಯಿತು.

ಅರಮನೆಯ ಯದುವೀರ್‌ಅವರ ನಿವಾಸಕ್ಕೆ ತೆರಳಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಸಮ್ಮುಖದಲ್ಲಿ ಬಿ ಫಾರಂ ನೀಡಲಾಯಿತು.

ಈ ವೇಳೆ ಮಾಜಿ ಶಾಸಕ ಪ್ರೀತಂ ಗೌಡ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್‌. ನಾಗೇಂದ್ರ, ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಸಚಿವ ಎಸ್‌.ಎ. ರಾಮದಾಸ್‌, ನಗರ ಪ್ರಧಾನ ಕಾರ್ಯದರ್ಶಿ ಕೇಬಲ್‌ ಮಹೇಶ್, ವಿಧಾನ ಪರಿಷತ್‌ಮಾಜಿ ಸದಸ್ಯ ಸಿದ್ದರಾಜು, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚ್ಯಾ ಮೊದಲಾದವರು ಇದ್ದರು.

-----------------

eom/mys/dnm/