Leopard attack: Basavanthappa's courage for forest employee

-ವಿಜಯನಗರ ಪ್ರವಾಸ ಮುಂದೂಡಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ

--

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತಾಲೂಕಿನ ಆನಗೋಡು ಸಮೀಪದ ಕೊಗ್ಗನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗಂಭೀರ ಗಾಯಗೊಂಡಿದ್ದ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಗಾಯಾಳು ಚಿರತೆ ದಾಳಿಗೊಳಗಾದ ಅರಣ್ಯ ಇಲಾಕೆ ನೌಕರ ಮರುಳಸಿದ್ದಪ್ಪ ದಾಖಲಾಗಿದ್ದ ನಗರದ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಗಾಯಾಳು ಹಾಗೂ ಕುಟುಂಬ ವರ್ಗಕ್ಕೆ ಧೈರ್ಯ ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೊಗ್ಗನೂರು ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಚಿರತೆ ಗಂಭೀರವಾಗಿ ಗಾಯಗೊಂಡು, ಮಂಗಳವಾರ ಬೆಳಗಿನವರೆಗೂ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆ ಮಧ್ಯದ ತಂತಿ ಬೇಲಿಗೆ ಹೊಂದಿಕೊಂಡಿರುವ ಚರಂಡಿಯಲ್ಲಿ ಹೊರಳಾಡುತ್ತಿದ್ದುದನ್ನು ಗಮನಿಸಿ ದಾರಿಹೋಕರು, ಗ್ರಾಮಸ್ಥರು ಅರಣ್ಯ ಇಲಾಖೆಯವರ ಗಮನಕ್ಕೆ ತಂದ ಹಿನ್ನೆಲೆ ಚಿರತೆ ಸೆರೆಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಚಿರತೆಗೆ ಬಲೆ ಹಾಕಲು ಮುಂದಾದಾಗ ಏಕಾಏಕಿ ಅರಣ್ಯ ಇಲಾಖೆಯವರ ಮೇಲೆ ಚಿರತೆ ಎರಗಿದೆ.

ಘಟನೆಯಲ್ಲಿ ಅರಣ್ಯ ಇಲಾಖೆ ನೌಕರ ಮರುಳಸಿದ್ದಪ್ಪನ ಕೈಗಳು, ತೊಡೆ ಹಾಗೂ ಬೆನ್ನಿಗೆ ಚಿರತೆ ಕಚ್ಚಿ, ತನ್ನ ಪಂಜುಗಳಿಂದ ಹಿಡಿದು, ರಕ್ತಗಾಯಗೊಳಿದೆ. ತಕ್ಷಣವೇ ಎಲ್ಲರೂ ಜೋರಾಗಿ ಕೂಗಿ, ಕಟ್ಟಿಗೆಯಿಂದ ತಿವಿದಿದ್ದರಿಂದ ಮತ್ತೆ ಚಿರತೆ ತಾನು ಬಂದ ಚರಂಡಿ ಕಡೆಗೆ ಹೋಗಿದೆ. ನಂತರ ಚಿರತೆಗೆ ಅರವಳಿಕೆ ಮದ್ದು ನೀಡಿ, ಯಶಸ್ವಿಯಾಗಿ ಹಿಡಿಯಲಾಯಿತು. ಮರುಳಸಿದ್ದಪ್ಪ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಸಚಿವ ಕೆ.ಎಸ್.ಬಸವಂತಪ್ಪ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ, ದಾವಣಗೆರೆ ಆಸ್ಪತ್ರೆಗೆ ಭೇಟಿ ನೀಡಿದರು. ಮರುಳಸಿದ್ದಪ್ಪಗೆ ಸೂಕ್ತ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಒದಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

.......ಬಾಕ್ಸ್‌....

-ಕಾಡು ಪ್ರಾಣಿಗಳ ಹಾವಳಿ: ಜನರಿಗೆ ಅರಿವು ಮೂಡಿಸಿ

ಮಾಯಕೊಂಡ, ಬಸವಾಪಟ್ಟಣ ಹಾಗೂ ಜಗಳೂರು ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಈಚೆಗೆ ಚಿರತೆಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಚಿವ ಕೆ.ಎಸ್.ಬಸವಂತಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ, ಹೆದ್ದಾರಿ ದಾಟುವಾಗ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಅಪಘಾತಕ್ಕೀಡಾಗುವುದು, ಗಂಭೀರವಾಗಿ ಗಾಯಗೊಳ್ಳುತ್ತಿರುವುದರಿಂದ ಅರಣ್ಯದಂಚಿನ ಗ್ರಾಮ, ಜನವಸತಿ ಪ್ರದೇಶ ಹಾಗೂ ಹೆದ್ದಾರಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು. ವನ್ಯಜೀವಿಗಳ ಸಂಚಾರದ ಕುರಿತು ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಬೇಕು. ಮಾರ್ಗದುದ್ದಕ್ಕೂ ವನ್ಯಜೀವಿಗಳಿರುವ ಎಚ್ಚರಿಕೆಯ ಫಲಕಗಳನ್ನೂ ಆಳವಡಿಸಬೇಕು ಎಂದು ಅವರು ಸೂಚಿಸಿದರು. ಅರಣ್ಯದಲ್ಲಿ ಪ್ರಾಣಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವೆ‌‌. ಗಾಯಾಳುಗೆ ಪರಿಹಾರ ನೀಡುವ ಕುರಿತು ಚರ್ಚಿಸುವುದಾಗಿ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.

----

ಫೋಟೊ..

ಕೆಡಿವಿಜಿ1, 2

ದಾವಣಗೆರೆ ತಾ. ಕೊಗ್ಗನೂರು ಬಳಿ ಚಿರತೆ ದಾಳಿಗೊಳಗಾದ ಅರಣ್ಯ ಇಲಾಖೆ ನೌಕರ ಮರುಳಸಿದ್ದಪ್ಪ ಆಸ್ಪತ್ರೆಗೆ ದಾಖಳಾಗಿದ್ದ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಭೇಚಿ ನೀಡಿ, ಧೈರ್ಯ ಹೇಳಿದರು.