ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ತಿಂದು ಬಿಟ್ಟಿರುವುದು.

ಕನ್ನಡಪ್ರಭ ವಾರ್ತೆ ಹನೂರು

ಕಳೆದ ಎರಡು ದಿನಗಳಿಂದ ಹಸು ಮತ್ತು ಮೇಕೆ ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಜರುಗಿದೆ.

ಮಲೆಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದ ವಲಯ ಅರಣ್ಯ ಪ್ರದೇಶದ ಅಂಚಿನ ಜಮೀನಿನಲ್ಲಿ ರೈತ ಮಾದೇವನ ಹಸುವನ್ನು ಬಿಡಲಾಗಿತ್ತು. ಇದೇ ವೇಳೆ ಚಿರತೆ ಹಸುವಿನ ಮೇಲೆ ದಾಳಿ ಮಾಡಿ ತಿಂದು ಹಾಕಿದೆ. ಜೊತೆಗೆ ಗೇರಟ್ಟಿ ಗ್ರಾಮದ ಮಾದೇಶ್ ರಂಗಪ್ಪ ಎಂಬುವರಿಗೆ ಸೇರಿದ ಮೇಕೆಯನ್ನು ಸಹ ಚಿರತೆ ತಿಂದು ಹಾಕಿದ್ದು, ಎರಡು ದಿನಗಳಲ್ಲಿ ಹಸು ಮತ್ತೆ ಮೇಕೆ ಚಿರತೆಗೆ ಬಲಿಯಾಗಿದೆ.

ಪರಿಹಾರಕ್ಕೆ ಒತ್ತಾಯ:

ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮದ ರೈತರ ಜಮೀನುಗಳಲ್ಲಿ ಜಾನುವಾರಗಳನ್ನು ಚಿರತೆ ದಾಳಿ ಮಾಡಿ ಕೊಂದು ತಿನ್ನುತ್ತಿರುವುದ್ದರಿಂದ ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆಕಡೆ ಬಿಡಬೇಕು ಜೊತೆಗೆ ಜಾನುವಾರು ಮೇಕೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಅರಣ್ಯ ಅಧಿಕಾರಿಗಳು ಭೇಟಿ:

ಚಿರತೆ ದಾಳಿಯಿಂದ ಜಾನುವಾರು ಮತ್ತು ಮೇಕೆ ಕಳೆದುಕೊಂಡಿರುವ ಘಟನಾ ಸ್ಥಳಕ್ಕೆ ಬಾಜಿರಾವ್ ಕೆದಾರಿ ಹಾಗೂ ತಮ್ಮಣ್ಣ ಕಣಳುವಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಿ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದಾರೆ.

ನಿರಂತರವಾಗಿ ರೈತರ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆ ಹಿಡಿಯಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿರುವ ಚಿರತೆಯಿಂದ ರೈತರು ಭಯ ಭೀತರಾಗಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಲು ಅರಣ್ಯ ಅಧಿಕಾರಿಗಳನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಒತ್ತಾಯಿಸಿದ್ದಾರೆ.