ಚಿರತೆ ದಾಳಿಯಿಂದ ರೈತನಿಗೆ ಗಾಯ: ಜನರ ಆಕ್ರೋಶ

| Published : Jul 27 2025, 12:00 AM IST

ಸಾರಾಂಶ

ಚಿರತೆ ದಾಳಿಯಿಂದ ರೈತ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಕೆ.ಆರ್.ಪೇಟೆ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಕೃಷಿ ಫಾರ್ಮ್ ಕಾಂಪೌಂಡ್ ಮೇಲೆ ಚಿರತೆ ಕುಳಿತು ದಾರಿ ಹೋಕರಿಗೆ ದರ್ಶನ ನೀಡಿ ಭೀತಿ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಚಿರತೆ ದಾಳಿಯಿಂದ ರೈತ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮುರುಕನಹಳ್ಳಿ ಗ್ರಾಮದ ಬಳಿ ಕೆ.ಆರ್.ಪೇಟೆ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಕೃಷಿ ಫಾರ್ಮ್ ಕಾಂಪೌಂಡ್ ಮೇಲೆ ಚಿರತೆ ಕುಳಿತು ದಾರಿ ಹೋಕರಿಗೆ ದರ್ಶನ ನೀಡಿ ಭೀತಿ ಮೂಡಿಸಿದೆ.

ಮಾಳಗೂರು ಗ್ರಾಮದ ರೈತ ಶಿವರಾಮೇಗೌಡ (52) ಜಮೀನಿನ ಬಳಿಯಿಂದ ಜಾನುವಾರು ಸಮೇತ ಮನೆಗೆ ತೆರಳುವಾಗ ಅವರ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಇದರಿಂದ ರೈತನ ಕತ್ತು, ಎದೆ ಮತ್ತು ಗಲ್ಲದ ಮೇಲೆ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿರತೆ ದಾಳಿ ಬಗ್ಗೆ ಶಿವರಾಮೇಗೌಡ ಮಾತನಾಡಿ, ಹಸು ಮೇಲೆ ದಾಳಿ ಮಾಡಲು ಮುಂದಾದಾಗ ಸ್ಥಳದಲ್ಲಿದ್ದ ನನ್ನ ಮೇಲೂ ದಾಳಿ ಮಾಡಿದೆ. ಸಂಜೆ ಬೆಳಕಿದ್ದಾಗಲೇ ಚಿರತೆ ದಾಳಿ ಮಾಡಿದ್ದು ಕೃಷಿ ಭೂಮಿಗೆ ಹೋಗುವುದಕ್ಕೂ ಭಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿರತೆ ದಾಳಿಯಿಂದ ಬೆದರಿ ನಾನು ಕಿರುಚಿಕೊಂಡಾಗ ಅಕ್ಕಪಕ್ಕದ ಜನ ಕೂಗಿಕೊಂಡರು. ಗಾಬರಿಯಿಂದ ಚಿರತೆ ಸ್ಥಳದಿಂದ ಪಲಾಯನ ಮಾಡಿತು. ಮಾಳಗೂರು ಮತ್ತು ಸುತ್ತಮುತ್ತಲ ಜನ ಚಿರತೆ ದಾಳಿಯಿಂದ ಭೀತಿಗೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮನೆ ಮುಂದೆ ತೆರಳಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರೈತನ ಮೇಲಿನ ಚಿರತೆ ದಾಳಿ ಸುದ್ದಿ ತಿಳಿದು ಪಟ್ಟಣದ ವಲಯ ಅರಣ್ಯಾಧಿಕಾರಿ ಅನಿತಾ ಇಲಾಖಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡ ರೈತ ಶಿವರಾಮೇಗೌಡರ ಆರೋಗ್ಯ ವಿಚಾರಿಸಿದರು. ಕೂಡಲೇ ಬೊನ್ ಇರಿಸಿ ಚಿರತೆ ಸೆರೆ ಹಿಡಿಯುವ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ರೈತ ದಾಳಿ ನಂತರ ಪಟ್ಟಣದ ಹೊರವಲಯದ ಮುರುಕನಹಳ್ಳಿ ಬಳಿ ಇರುವ ತೋಟಗಾರಿಕಾ ಇಲಾಖೆ ಕೃಷಿ ಫಾರ್ಮ್ ಮುಂದಿನ ಕಾಂಪೌಂಡ್ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕೆ.ಆರ್.ಪೇಟೆ- ಮೈಸೂರು ರಾಜ್ಯ ಹೆದ್ದಾರಿಯಲ್ಲಿಯೇ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದೆ.

ಕಾಂಪೌಂಡ್ ಮೇಲೆ ಚಿರತೆ ಕುಳಿತಿರುವ ದೃಶ್ಯವನ್ನು ವಾಹನ ಚಾಲಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಅಲ್ಲದೇ, ಇತ್ತೀಚೆಗೆ ತಾಲೂಕಿನ ಸುಪ್ರಸಿದ್ದ ಗವೀಮಠದ ಬಳಿಯೂ ಜೋಡಿ ಚಿರತೆಗಳು ಕಾಣಿಸಿಕೊಂಡು ಜನರಲ್ಲಿ ಭೀತಿ ಆತಂಕ ತಂದೊಡ್ಡಿದೆ.

ತಾಲೂಕಿನಾದ್ಯಂತ ಎಲ್ಲೆಡೆ ಚಿರತೆ ಹಾವಳಿ ಹೆಚ್ಚಾಗಿದೆ. ತೋಟದ ಮನೆಗಳ ರೈತರ ಸಾಕು ನಾಯಿಗಳು ಮತ್ತು ದನಕರುಗಳು ನಿತ್ಯ ಒಂದಲ್ಲ ಒಂದು ಕಡೆ ಚಿರತೆ ಬಾಯಿಗೆ ಸೇರುತ್ತಿವೆ. ಇದುವರೆಗೆ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಹಾಡಹಗಲೇ ಕಾಣಿಸಿಕೊಳ್ಳುತ್ತಿವೆ. ರೈತರು ಒಬ್ಬಂಟಿಯಾಗಿ ಹೊಲ ಗದ್ದೆಗಳಿಗೆ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿದು ನಿಯಂತ್ರಿಸುವಂತೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.