ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಮೇಕೆಗಳ ಮೇಲೆ ಚಿರತೆಗಳು ದಾಳಿ ನಡೆಸಿ ಸುಮಾರು ಹತ್ತು ಮೇಕೆಗಳನ್ನು ಕೊಂದು ಪರಾರಿಯಾಗಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಗ್ರಾಮದ ಚಿಕ್ಕಬೋರೇಗೌಡರ ಪುತ್ರ ನಿತಿನ್ ಅವರಿಗೆ ಸೇರಿದ ಮೇಕೆಗಳು ಸಾವನ್ನಪ್ಪಿದ್ದು, ರೈತನಿಗೆ ಲಕ್ಷಾಂತರ ರು. ನಷ್ಟವಾಗಿದೆ.
ಬುಧವಾರ ಮಧ್ಯರಾತ್ರಿ ಮನೆ ಪಕ್ಕದಲ್ಲಿರುವ ಮೇಕೆಗಳ ಕೊಟ್ಟಿಗೆಗೆ ಚಿರತೆಗಳು ದಾಳಿ ನಡೆಸಿ ಮೇಕೆಗಳ ಕುತ್ತಿಗೆ ಭಾಗವನ್ನು ಹಿಡಿದು ಸಾಯಿಸಿ ರಕ್ತಕುಡಿದು ಪರಾರಿಯಾಗಿವೆ. ಘಟನೆಯಲ್ಲಿ ಸುಮಾರು 10 ಮೇಕೆಗಳು ಸಾವನ್ನಪ್ಪಿವೆ.ಮೇಕೆಗಳನ್ನು ಕೊಂದಿರುವ ಚಿರತೆಗಳು ಎರಡು ಮೇಕೆಯನ್ನು ಹೊತ್ತೊಯ್ದಿವೆ. ಉಳಿದ ಎಂಟು ಮೇಕೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿವೆ. ಗುರುವಾರ ಬೆಳಗ್ಗೆ ಎದ್ದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸಾವನ್ನಪ್ಪಿರುವ ಮೇಕೆಗಳು ಹೈಬ್ರಿಡ್ ಥಳಿಯ ಮೇಕೆಗಳಾಗಿವೆ. ಒಂದೊಂದು ಮೇಕೆಗಳು ಸಹ 18 ರಿಂದ 20 ಸಾವಿರ ಬೆಲೆ ಬಾಳುತ್ತಿದ್ದವು ಎನ್ನಲಾಗಿದೆ. ಘಟನೆಯಿಂದ ಅಂದಾಜು 2 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಘಟನಾಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುಸಂಗೋಪಾನ ಇಲಾಖೆಯ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲಿಸಿ, ಮೃತಪಟ್ಟ ಮೇಕೆಗಳ ಪಂಚನಾಮೆ ನಡೆಸಿದರು. ಅರಣ್ಯಾಧಿಕಾರಿಗಳು ಇಲಾಖೆಯಿಂದ ಸೂಕ್ತಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಚಿಕ್ಕಮರಳಿ, ನುಗ್ಗಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದರೂ ಸಹ ಅರಣ್ಯಾಧಿಕಾರಿಗಳು ಚಿರತೆಗಳ ಸೆರೆಗೆ ಮುಂದಾಗದೆ ಇರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಚಿಕ್ಕಮರಳಿ ಗ್ರಾಮದಲ್ಲಿ ಪದೇ ಪದೇ ಕುರಿ, ಮೇಕೆ, ಹಸುಗಳ ಮೇಲೆ ಚಿರತೆ ದಾಳಿ ನಡೆಯುತ್ತಲೇ ಇದ್ದು, ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ದೂರು ಕೊಟ್ಟಾಗ ಬೋನ್ ಹಾಕುತ್ತಾರೆ. ಬಳಿಕ ಬೋನ್ ತೆಗೆದುಕೊಂಡು ಹೋಗುತ್ತಾರೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಮೂರ್ನಾಲ್ಕು ಬೋನ್ ಗಳನ್ನು ಹಾಕಿ ಚಿರತೆ ಸೇರೆಗೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.