ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ (ಸೇವಾ ನಗರದ) ಹೊರವಲಯದಲ್ಲಿ ಇಂದು ಸಂಜೆ ಚಿರತೆ ಹಠಾತ್ ದಾಳಿ ನಡೆಸಿ ದಡ್ಡಿಯಲ್ಲಿ ಕೂಡಿ ಹಾಕಿದ್ದ ₹ 5 ಲಕ್ಷಕ್ಕೂ ಹೆಚ್ಚು ಮೌಲ್ಯದ 40ಕ್ಕೂ ಹೆಚ್ಚು ಕುರಿಮರಿಗಳ ರಕ್ತಹೀರಿ ಪರಾರಿಯಾಗಿದೆ.
ಬ್ಯಾಡಗಿ: ತಾಲೂಕಿನ ಕಲ್ಲೇದೇವರ ಗ್ರಾಮದ (ಸೇವಾ ನಗರದ) ಹೊರವಲಯದಲ್ಲಿ ಇಂದು ಸಂಜೆ ಚಿರತೆ ಹಠಾತ್ ದಾಳಿ ನಡೆಸಿ ದಡ್ಡಿಯಲ್ಲಿ ಕೂಡಿ ಹಾಕಿದ್ದ ₹ 5 ಲಕ್ಷಕ್ಕೂ ಹೆಚ್ಚು ಮೌಲ್ಯದ 40ಕ್ಕೂ ಹೆಚ್ಚು ಕುರಿಮರಿಗಳ ರಕ್ತಹೀರಿ ಪರಾರಿಯಾಗಿದೆ.
ಕುರಿಮರಿಗಳು ಸೇವಾನಗರದ ನಿವಾಸಿ ಲಚಮಪ್ಪ ಕನ್ನಪ್ಪ ಲಮಾಣಿ ಹಾಗೂ ಪೀರಪ್ಪ ಶಂಕ್ರಪ್ಪ ಲಮಾಣಿ ಅವರಿಗೆ ಸೇರಿವೆ. ಈರ್ವರು ದೊಡ್ಡ ಕುರಿಗಳನ್ನು ಮೇಯಿಸಲೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದು ಮರಿಗಳನ್ನು ದಡ್ಡಿಯಲ್ಲಿ ಕೂಡಿ ಹಾಕಿ ತೆರಳಿದ್ದರು. ಯಾರೂ ಇಲ್ಲದ ಸಮಯವನ್ನು ನೋಡಿ ಚಿರತೆ ಸುಮಾರು 8 ಅಡಿಗಳಷ್ಟು ಎತ್ತರವಿದ್ದ ದಡ್ಡಿ ಬಲೆಯನ್ನು ಹಾರಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.ಕಣ್ಣೀರಿಟ್ಟ ಕುರಿಗಳ ಮಾಲೀಕರು: ಅಡವಿಯಿಂದ ಮರಳಿ ಬರುತ್ತಿದ್ದಂತೆ ಕುರಿಮರಿಗಳು ಸತ್ತು ಬಿದ್ದಿರುವುದನ್ನು ನೋಡಿದ ಲಚಮಪ್ಪ ಹೇಮವ್ವ ಹಾಗೂ ಪೀರಪ್ಪ ಸೋನವ್ವ ದಂಪತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯವು ಕರಳು ಕಿತ್ತು ಬರುವಂತಿತ್ತು. ಕುರಿದಡ್ಡಿಯು ಗ್ರಾಮಕ್ಕೆ 1 ಕಿ.ಮೀ. ದೂರದಲ್ಲಿದ್ದು ಘಟನೆಯನ್ನು ಯಾರೂ ಸಹ ಕಣ್ಣಾರೆ ವಿವರಿಸಲು ಸಾಧ್ಯವಾಗಿಲ್ಲ. ಚಿರತೆ ದಾಳಿಯಿಂದ ಗ್ರಾಮವೇ ನಲುಗಿದ್ದು, ಶಾಲೆಗೆ ಮಕ್ಕಳು ಮರಿಗಳು, ಕೃಷಿ ಚಟುವಟಿಕೆ ಮುಗಿಸಿ ಮರಳಿ ಸಂಜೆ ಮನೆಗೆ ಬರುವ ವೇಳೆಯಲ್ಲಿ ಘಟನೆ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ದಾಳಿಯಿಂದ ಕುರಿಮರಿಗಳ ದೇಹದ ಮೇಲೆ ಚಿರತೆ ಹಲ್ಲು ಮತ್ತು ಉಗುರುಗಳು ಗುರ್ತು ಸಿಕ್ಕಿದೆ. ಹೀಗಾಗಿ ಗ್ರಾಮದ ಜನರಲ್ಲಿ ಇನ್ನಷ್ಟು ಆತಂಕ ಮನೆ ಮಾಡಿದೆ.ವನ್ಯ ಮೃಗಗಳ ಹಾವಳಿಗೆ ಇಡೀ ಗ್ರಾಮವೇ ನಲುಗಿದೆ. ಈ ಹಿಂದೆಯೂ ಕೂಡ ಸದರಿ ಪ್ರದೇಶದ ಅಕ್ಕಪಕ್ಕದಲ್ಲಿ ಚಿರತೆ ದಾಳಿ ನಡೆಸಿದ್ದು ಕೋಳಿಗಳ ಮಾರಣ ಹೋಮವಾಗಿತ್ತು. ಕೂಡಲೇ ಸರ್ಕಾರ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಪರಮೇಶ ನಾಯಕ್ ಹೇಳಿದರು.ಚಿರತೆ ಅಕಾಲಿಕ ದಾಳಿಯಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಕುರಿಮರಿಗಳು ಸಾವನ್ನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈಗಾಗಲೇ ದೂರವಾಣಿ ಮೂಲಕ ಅಧಿಕಾರಿಗಳ ಸೂಚನೆಯನ್ನು ನೀಡಿದ್ದು, ಚಿರತೆಯನ್ನು ಸೆರೆ ಹಿಡಿಯುವುದು ಸೇರಿದಂತೆ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.