ಸಾರಾಂಶ
ಚಿರತೆ ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಕೊರ್ಗಿ ಗ್ರಾ. ಪಂ. ವ್ಯಾಪ್ತಿಯ ಚಾರುಕೊಟ್ಟಿಗೆ ಎಂಬಲ್ಲಿ ಘಟನೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಚಿರತೆಯೊಂದು ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ 10 ದಿನದ ಕರುವಿನ ಮೇಲೆ ದಾಳಿ ನಡೆಸಿದ ಘಟನೆ ಇಲ್ಲಿನ ಕೊರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾರುಕೊಟ್ಟಿಗೆ ಎಂಬಲ್ಲಿ ನಡೆದಿದೆ.ಮೀನು ವ್ಯಾಪಾರಸ್ಥರಾಗಿರುವ ಕೊರ್ಗಿ ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಮೊಗವೀರ ಅವರ ಮನೆಯ ಸಮೀಪ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಕರು ಒಮ್ಮೆಲೆ ಜೋರಾಗಿ ಕೂಗಿದೆ. ಎಚ್ಚೆತ್ತುಕೊಂಡ ರಾಘವೇಂದ್ರ ಅವರು ಜೋರಾಗಿ ಶಬ್ಧ ಮಾಡಿದ ಪರಿಣಾಮ ಕರುವಿಗೆ ಗಾಯಗೊಳಿಸಿದ ಚಿರತೆ ಓಡಿ ಹೋಗಿದೆ.
ಗ್ರಾಮೀಣ ಪ್ರದೇಶವಾದ ತೆಕ್ಕಟ್ಟೆಯ ಮಾಲಾಡಿ ಸೇರಿದಂತೆ ಈ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಚಿರತೆಯ ಕಾಟ ವರದಿಯಾಗುತ್ತಿದ್ದು, ಅರಣ್ಯ ಇಲಾಖೆಯೂ ಸಾಕಷ್ಟು ಬಾರಿ ಕಾರ್ಯಾಚರಣೆಯನ್ನು ನಡೆಸಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಪರಿಸರದ ಸಾರ್ವಜನಿಕರು ದಿನನಿತ್ಯ ಕೆಲಸಗಳಿಗಾಗಿ ಈ ಭಾಗದಲ್ಲಿ ತಿರುಗಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಜಾನುವಾರು ಮತ್ತು ನಾಯಿಗಳ ಮೇಲೆ ಚಿರತೆ ನಡೆಸುತ್ತಿರುವ ದಾಳಿಯಿಂದ ಜನರು ಕಂಗಾಲಾಗಿದ್ದಾರೆ. ಅಕ್ಕ-ಪಕ್ಕದ ಗ್ರಾಮಗಳಲ್ಲಿಯೂ ಚಿರತೆ ಕಾಟದ ಬಗ್ಗೆ ಮಾಹಿತಿಗಳು ಬರುತ್ತಿದ್ದು, ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.