ಸಾರಾಂಶ
ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತೋಟ ಹಾಗೂ ಜಮೀನಿನ ಕೆಲಸ ಹೋದರೆ ಎಲ್ಲಿ ಚಿರತೆ ದಾಳಿ ಮಾಡುತ್ತದೋ ಎಂದು ಭಯಭೀತರಾಗಿರುವ ಜನರು ಜಮೀನಿನತ್ತ ಮುಖಮಾಡುತ್ತಿಲ್ಲ.
ಕುಕನೂರು:
ಕುರಿಹಟ್ಟಿಯ ಮೇಲೆ ದಾಳಿ ನಡೆಸಿದ ಚಿರತೆ 14 ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ನೆಲಜೇರಿ ಗ್ರಾಮದ ಕುರಿಗಾಹಿ ಶಂಕ್ರಪ್ಪ ರಾಜಪ್ಪ ಕರಡಿ ಅವರಿಗೆ ಸೇರಿದ್ದ ಕುರಿಗಳಿವು ಎಂದು ತಿಳಿದು ಬಂದಿದೆ. ಈ ಚಿರತೆ ದಾಳಿಯಿಂದ ಅಪಾರ ಪ್ರಮಾಣ ಹಾನಿಯಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ. ಬೇವೂರಿನ ದೇವಪ್ಪ ಬೇವಿನಗಿಡದ ಅವರ 23 ಕುರಿಯನ್ನು ಪಾಲಿಗಾಗಿ ತೆಗೆದುಕೊಂಡಿದ್ದ ಶಂಕ್ರಪ್ಪ, ಗ್ರಾಮದ ಹೊರವಲಯದಲ್ಲಿ ಕುರಿಹಟ್ಟಿ ಮಾಡಿಕೊಂಡು ಸಾಕುತ್ತಿದ್ದ. ಆದರೆ, ಬುಧವಾರ ರಾತ್ರಿ ಏಕಾಏಕಿ ದಾಳಿ ನಡೆಸಿರುವ ಚಿರತೆಯಿಂದ 14 ಕುರಿಗಳು ಸತ್ತಿದ್ದು ಶಂಕ್ರಪ್ಪ ಹಾಗೂ ದೇವಪ್ಪ ಕಂಬನಿ ಮಿಡಿದಿದ್ದಾರೆ.ಬೇಸ್ತು ಬಿದ್ದ ಜನ:
ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತೋಟ ಹಾಗೂ ಜಮೀನಿನ ಕೆಲಸ ಹೋದರೆ ಎಲ್ಲಿ ಚಿರತೆ ದಾಳಿ ಮಾಡುತ್ತದೋ ಎಂದು ಭಯಭೀತರಾಗಿರುವ ಜನರು ಜಮೀನಿನತ್ತ ಮುಖಮಾಡುತ್ತಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜ, ಚಿರತೆ ಸೆರೆಗೆ ಗ್ರಾಮದ ಹೊರವಲಯದಲ್ಲಿ ಬೋನ್ ಅಳವಡಿಸಿದ್ದಾರೆ.ಕುರಿಗಾಯಿ ಶಂಕ್ರಪ್ಪ ಮಾತನಾಡಿ, ಕುರಿ ನಂಬಿ ಬದುಕು ಕಟ್ಟಿಕೊಂಡಿದ್ದೆವು. ಆದರೆ, ಚಿರತೆ ದಾಳಿಯಿಂದ ಕುರಿಗಳು ಸಾವನ್ನಪ್ಪಿದ್ದು ನಮ್ಮನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನೆಲಜೇರಿ ಗ್ರಾಮದಲ್ಲಿ ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ವರದಿ ಪಡೆಯಲಾಗಿದೆ. ಆ ಭಾಗದಲ್ಲಿ ಚಿರತೆ ಓಡಾಟ ಇರುವುದರಿಂದ ಜನ ಎಚ್ಚರಿಕೆ ವಹಿಸಬೇಕಿದ್ದು ಚಿರತೆ ಸೆರೆಗೆ ಬೋನ್ ಅಳವಡಿಕೆ ಮಾಡಲಾಗಿದೆ.ಸ್ವಾತಿ, ವಲಯ ಅರಣ್ಯಾಧಿಕಾರಿ ಕೊಪ್ಪಳ