ಮೂವರ ಮೇಲೆ ಚಿರತೆ ದಾಳಿ : ಗ್ರಾಮಸ್ಥರಿಂದಲೇ ಹತ್ಯೆ

| Published : Jul 08 2024, 12:30 AM IST / Updated: Jul 08 2024, 10:01 AM IST

ಸಾರಾಂಶ

ತಾಲೂಕಿನ ಕಮದಾಳ ಗ್ರಾಮದಲ್ಲಿ 3 ಜನರ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಗುಡ್ಡ

ದೇವದುರ್ಗ: ತಾಲೂಕಿನ ಕಮದಾಳ ಗ್ರಾಮದಲ್ಲಿ ಮೂರು ಜನರ ಮೇಲೆ ಚಿರತೆ ದಾಳಿ ಮಾಡಿದ ಘಟನೆಯಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಜಾಡು ಹಿಡಿದು ಹೊಡೆದು ಹತ್ಯೆಗೈದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ವರದಿ ಸಲ್ಲಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಸಚಿವರ ಸೂಚನೆ ಮೇರೆಗೆ ದೇವದುರ್ಗ ವಲಯದ ಇಲಾಖೆಯ ಅಧಿಕಾರಿಗಳು ಹಂತ ಹಂತವಾಗಿ ಘಟನೆಯ ಮಾಹಿತಿಯನ್ನು ಸಚಿವರಿಗೆ ನೀಡಿದ್ದು ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೋಲೀಸರನ್ನು ಮೇಲಿಂದ ಮೇಲೆ ಕೋರಿದ್ದರು ಸಹ ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಸಾರ್ವಜನಿಕರು ಚಿರತೆ ಇರುವ ಸ್ಥಳಕ್ಕೆ ನುಗ್ಗಿ ಚಿರತೆಯನ್ನು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ. 

ಬೆಳಗ್ಗೆ ಕಮದಾಳ ಗ್ರಾಮದಲ್ಲ ಚಿರತೆ ವ್ಯಕ್ತಿ ಮೇಲೆ ದಾಳಿ ನಡೆಸಿದ್ದು, ನಂತರ ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿ, ಗ್ರಾಮ ಠಾಣದ ಪಕ್ಕದ ಕಲ್ಲು ಬಂಡೆ ಇರುವ ಗುಡ್ಡದಲ್ಲಿ ಚಿರತೆ ಇರುವುದರ ಕುರಿತು ಖಾತರಿ ಪಡಿಸಿಕೊಂಡಿದ್ದು, ಮಾನ್ವಿ ವಲಯದಲ್ಲಿದ್ದ ಬೋನ್-ಬಲೆಯನ್ನು ತರಿಸಿ ಚಿರತೆಯನ್ನು ಸೆರೆಹಿಡಿಯಲು ಮುಂದಾಗಿದ್ದು, ಹೊಸಪೇಟೆಯಿಂದ ಅರವಳಿಕೆ ತಜ್ಞರ ತಂಡವನ್ನು ಸಂಪರ್ಕಿಸಿ ಕಾರ್ಯಾಚರಣೆ ಕಳುಹಿಸಲು ಕೋರಲಾಯಿತು. ಇಷ್ಟರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದ ಕಾರಣಕ್ಕೆ ರೊಚ್ಚಿಗೆದ್ದ ಜನರು ಚಿರತೆಯನ್ನು ಕೊಂದುಹಾಕಿದ್ದಾರೆ.

 ನಂತರ ಚಿರತೆ ಮೃತದೇಹವನ್ನು ವಲಯ ಕಚೇರಿಗೆ ತಂದಿದ್ದು, ಕೊಲ್ಲಲು ಬಳಸಿದ ಎರಡು ಭರ್ಜಿಗಳನ್ನು ವಶಕ್ಕೆ ಪಡೆದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಕ್ಷಿಗಳನ್ನು ಕಲೆಹಾಕಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.