ಕಡಬಗಟ್ಟಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎಮ್ಮೆಯ ಕರುವನ್ನು ಕೊಂದು ಹಾಕಿರುವ ಘಟನೆ ಮಂಗಳವಾರ ನಡೆದಿದೆ.
ಅಳ್ನಾವರ:
ಸಮೀಪದ ಕಡಬಗಟ್ಟಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎಮ್ಮೆಯ ಕರುವನ್ನು ಕೊಂದು ಹಾಕಿರುವ ಘಟನೆ ಮಂಗಳವಾರ ನಡೆದಿದೆ.ಗ್ರಾಮದ ಆಶಾಭಿ ಹುಲ್ತಿಕೋಟಿ ಎಂಬುವರಿಗೆ ಸೇರಿದ ಎಮ್ಮೆ ಕರು ಇದಾಗಿದ್ದು, ಧಾರವಾಡ ಗೋವಾ ಹೆದ್ದಾರಿಯ ಪಕ್ಕದಲ್ಲಿರು ತಮ್ಮ ಜಮೀನಿನಲ್ಲಿ ಎಮ್ಮೆ ಮತ್ತು ಕರುವನ್ನು ಮೇಯಿಸಲು ಬಿಡಲಾಗಿತ್ತು. ಮಂಗಳವಾರ ಬೆಳಗಿನ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಕರುವನ್ನು ಕೊಂದಿದೆ. ಕರುವಿನ ದೇಹದ ಮೇಲೆ ಚಿರತೆಯ ದಾಳಿಯ ಗುರುತುಗಳು ಕಂಡುಬಂದಿವೆ.
ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಸಂಚಾರದ ಸುದ್ದಿ ಇತ್ತು. ಈ ಪ್ರದೇಶದ ಕೆಲವು ನಾಯಿಗಳ ಮೇಲೆ ದಾಳಿ ನಡೆಸಿದ್ದ ಚಿರತೆ ಇದೀಗ ಜಾನುವಾರುಗಳ ಮೇಲೆ ದಾಳಿ ಆರಂಭಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ಭೀತಿಯನ್ನು ಹುಟ್ಟುಹಾಕಿದೆ. ಸಾರ್ವಜನಿಕರು ಹಾಗೂ ಜಾನುವಾರುಗಳ ರಕ್ಷಣೆಗೆ ಅರಣ್ಯ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಬೇಕು. ಸೂಕ್ತ ಸ್ಥಳಗಳಲ್ಲಿ ಬೋನು ಅಳವಡಿಸಿ ಚಿರತೆಯನ್ನು ಬಂಧಿಸಬೇಕು ಹಾಗೂ ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಶುವಿನ ಮರಣೋತ್ತರ ಪರೀಕ್ಷೆಯ ನಂತರ ಯಾವ ಪ್ರಾಣಿಯಿಂದ ದಾಳಿ ನಡೆದಿದೆ ಎಂದು ಹೇಳಬಹುದು.
ಭಾಗದಲ್ಲಿ ಚಿರತೆಯ ಚಲನವಲನಗಳು ಕಂಡು ಬಂದಿದ್ದು ಇಲಾಖೆಯಿಂದ ಸಿಸಿ ಕ್ಯಾಮೆರಾ ಮತ್ತು ಆಯ್ದ ಸ್ಥಳಗಳಲ್ಲಿ ಬೋನುಗಳನ್ನು ಇಡಲಾಗಿದ್ದು, ಯಾವುದೇ ರೀತಿ ಹಾನಿ ಉಂಟಾಗದಂತೆ ಕ್ರಮಕೈಗೊಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.