ದನಕರುಗಳ ಮೇಲೆ ಚಿರತೆ ದಾಳಿ; ಸೆರೆಹಿಡಿಯುವಂತೆ ಗ್ರಾಮಸ್ಥರ ಆಗ್ರಹ

| Published : Jul 11 2025, 11:48 PM IST

ಸಾರಾಂಶ

ಗ್ರಾಮದ ಸಮೀಪ ರಕ್ಷಿತ ಅರಣ್ಯ ಪ್ರದೇಶವಿದ್ದು, ಕಳೆದ ಹಲವಾರು ದಿನಗಳಿಂದ ಹೆಣ್ಣು ಚಿರತೆಯೊಂದರ ಹಾವಳಿ ಅಧಿಕವಾಗಿದ್ದು, ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅವುಗಳಿಗೆ ಆಹಾರ ಒದಗಿಸುವ ಸಲುವಾಗಿ ಹೆಣ್ಣು ಚಿರತೆ ಸಿಗರನಹಳ್ಳಿ ಸುತ್ತಮುತ್ತ ನಿತ್ಯವೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ, ಜನರು ಸಂಜೆ ಆಗುತ್ತಿದ್ದಂತೆ ಮನೆಯಿಂದ ಹೊರಬಾರದಂತಹ ಭಯದ ವಾತಾವರಣ ಸೃಷ್ಟಿಯಾಗಿದೆ.

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಯ ಸಿಗರನಹಳ್ಳಿಯ ಸುತ್ತ ಮುತ್ತ ಚಿರತೆ ಆಹಾರಕ್ಕಾಗಿ ಪ್ರತಿನಿತ್ಯ ನಾಯಿ, ಕುರಿ, ಮೇಕೆ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದು, ಇದರಿಂದ ಬಹಳ ತೊಂದರೆಯಾಗುತ್ತಿದೆ. ಜತೆಗೆ ಜೀವಭಯವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಗ್ರಾಮದ ಸಮೀಪ ರಕ್ಷಿತ ಅರಣ್ಯ ಪ್ರದೇಶವಿದ್ದು, ಕಳೆದ ಹಲವಾರು ದಿನಗಳಿಂದ ಹೆಣ್ಣು ಚಿರತೆಯೊಂದರ ಹಾವಳಿ ಅಧಿಕವಾಗಿದ್ದು, ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅವುಗಳಿಗೆ ಆಹಾರ ಒದಗಿಸುವ ಸಲುವಾಗಿ ಹೆಣ್ಣು ಚಿರತೆ ಸಿಗರನಹಳ್ಳಿ ಸುತ್ತಮುತ್ತ ನಿತ್ಯವೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ, ಜನರು ಸಂಜೆ ಆಗುತ್ತಿದ್ದಂತೆ ಮನೆಯಿಂದ ಹೊರಬಾರದಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಚಿರತೆ ಸಮಸ್ಯೆ ಕುರಿತಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ ಚಿರತೆಯ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕುರಿ, ಮೇಕೆ, ನಾಯಿ ಹಾಗೂ ಏಳು ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆದಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಬುಧವಾರ ರಾತ್ರಿ ಚಿರತೆಯು ಮೇಕೆಯ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಮಾತನಾಡಿ, ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಸಿಗರನಹಳ್ಳಿ ಗ್ರಾಪಂ ಸದಸ್ಯ ರವಿ ಎಂಬುವರ ಮನೆ ಸಮೀಪ ಹಾಗೂ ಚನ್ನಾಪುರ ಹರೀಶ್ ಎಂಬುವರ ಮನೆ ಸಮೀಪ ಚಿರತೆ ಸೆರೆ ಹಿಡಿಯಲು ೨ ಬೋನ್ ಇಟ್ಟಿದ್ದೇವೆ ಎಂದು ತಿಳಿಸಿದರು.