ಹೊಸೂರಲ್ಲಿ ಮನೆ ಬಳಿಗೇ ಬಂದ ಚಿರತೆ: ಮಹಿಳೆ ಪಾರು!

| Published : Apr 01 2025, 12:49 AM IST

ಸಾರಾಂಶ

ತಾಲೂಕಿನ ಸೂಳೆಕೆರೆ ಬಳಿಯಿರುವ ಹೊಸೂರು ಗ್ರಾಮದ ಬಳಿ ಸುವರ್ಣಮ್ಮ ಎಂಬವರ ಮನೆ ಬಳಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಇದರಿಂದ ಸೂಳೆಕೆರೆ ಅಕ್ಕಪಕ್ಕದ ಗ್ರಾಮಗಳ ಜನರು ಭೀತಿಗೊಂಡಿದ್ದಾರೆ.

- ಚಿರತೆ ಕಂಡು ಕಿರುಚಾಡಿದ ಸುವರ್ಣಮ್ಮ । ಶನಿವಾರ ಕೆರೆಬಿಳಚಿಯಲ್ಲಿ 45 ಕೋಳಿಗಳ ತಿಂದಿರುವ ಚಿರತೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸೂಳೆಕೆರೆ ಬಳಿಯಿರುವ ಹೊಸೂರು ಗ್ರಾಮದ ಬಳಿ ಸುವರ್ಣಮ್ಮ ಎಂಬವರ ಮನೆ ಬಳಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಇದರಿಂದ ಸೂಳೆಕೆರೆ ಅಕ್ಕಪಕ್ಕದ ಗ್ರಾಮಗಳ ಜನರು ಭೀತಿಗೊಂಡಿದ್ದಾರೆ.

ಭಾನುವಾರ ಸುವರ್ಣಮ್ಮ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿ, ಊಟ ಮಾಡಿ ಮನೆಯ ಕದವನ್ನು ಹಾಕಿಕೊಂಡು ಒಳಗೆ ಇದ್ದರು. ತಾಂಬೂಲ ಮೆಲ್ಲುತ್ತಿದ್ದ ಅವರು ಹೊರಗಡೆ ತಾಂಬೂಲ ಉಗಿಯಲು ಹೋಗಿದ್ದಾರೆ. ಆಗ ಚಿರತೆ ಮನೆ ಮುಂದೆಯೇ ಕಂಡಿದ್ದನ್ನು ನೋಡಿ, ಹೆದರಿ ಜೋರಾಗಿ ಕೂಗಿಕೊಂಡಿದ್ದಾರೆ. ಸುತ್ತಮುತ್ತಲ ಜನರು ಬಂದು ಸೇರುವ ಹೊತ್ತಿಗೆ ಚಿರತೆ ಪಲಾಯನ ಮಾಡಿದೆ.

ಶನಿವಾರ ರಾತ್ರಿ ಕೆರೆಬಿಳಚಿ ಗ್ರಾಮದ ಖಲೀಲ್ ಎಂಬವರು ಸಾಕಿದ್ದ 45 ಕೋಳಿಗಳನ್ನು ಚಿರತೆ ತಿಂದುಹೋಗಿದೆ. ಎಂಟ್ಹತ್ತು ದಿನಗಳಿಂದ ಚಿರತೆ ತಿರುಗಾಟದಿಂದ ಜನರು ಒಬ್ಬಂಟಿಗರಾಗಿ ತಿರುಗಾಡಲು ಭಯ ಪಡುತ್ತಿದ್ದಾರೆ. ಸೂಳೆಕೆರೆಯ ಸುತ್ತಮುತ್ತಲ ಅಡಕೆ ತೋಟಗಳಿಗೆ ರೈತರು ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಕೆರೆಬಿಳಚಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅಸ್ಲಾಂ ಶೇಖ್ ಹೇಳುವಂತೆ, ಗಂಭೀರ ವಿಚಾರವೆಂದರೆ, ಸೂಳೆಕೆರೆ ಬಸ್ ನಿಲ್ದಾಣದಲ್ಲಿ ಯಾವುದೇ ವಸತಿಗಳಿಲ್ಲ. ರಾತ್ರಿ 8 ಗಂಟೆಯಾಯಿತೆಂದರೆ ಅಲ್ಲಿರುವ ಒಂದು ಅಂಗಡಿ ಹೊಟೇಲ್ ಸಹ ಬಾಗಿಲು ಮುಚ್ಚುತ್ತಾರೆ. ಆಮೇಲೆ ಅಲ್ಲಿ ಜನ ಸಂಚಾರವೇ ಇರುವುದಿಲ್ಲ. ಬಸ್ ನಿಲ್ದಾಣದಲ್ಲಿಯೇ ಇರುವ ಪಾಳುಬಿದ್ದಿರುವ ಪ್ರವಾಸಿ ಮಂದಿರವಿದೆ. ಆ ಕಟ್ಟಡದಲ್ಲಿ ಚಿರತೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಅರಣ್ಯ ಸಿಬ್ಬಂದಿ ಪಾಳು ಪ್ರವಾಸಿ ಮಂದಿರದಲ್ಲಿಯೂ ಪ್ರತಿ ದಿನವು ತಪಾಸಣೆ ನಡೆಸಬೇಕಿದೆ ಎನ್ನುತ್ತಾರೆ.

ಈ ಹಿಂದೆಯೂ ಇದೇ ಪಾಳು ಬಿದ್ದಿರುವ ಪ್ರವಾಸಿ ಮಂದಿರದಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆ ತಿರುಗಾಟದಿಂದ ಜನತೆಯಲ್ಲಿ ಆತಂಕವಂತೂ ಮನೆ ಮಾಡಿದೆ.

- - -

(ಬಾಕ್ಸ್‌) * ಬೋನಿನ ಸಮೀಪ ಚಿರತೆ ಸುಳಿದಾಟ ಅರಣ್ಯ ಇಲಾಖೆಯ ಫಾರೆಸ್ಟರ್ ತಿಪ್ಪೇಸ್ವಾಮಿ ಈ ಕುರಿತು ಮಾತನಾಡಿದ್ದು, ಕಳೆದೊಂದು ವಾರದಿಂದ ಸೂಳೆಕೆರೆಯ ಕೋಡಿ ಹರಿಯುವ ಸ್ಥಳದಲ್ಲಿ ಚಿರತೆ ಹಿಡಿಯುವ ಬೋನು ತಂದು ಅರಣ್ಯ ಇಲಾಖೆಯ ಸಿಬ್ಬಂದಿ ಅಳವಡಿಸಿದ್ದಾರೆ. ಚಿರತೆಯು ಬೋನು ಬಳಿ ಸುತ್ತಾಡಿರುವ ಹೆಜ್ಜೆಯ ಗುರುತುಗಳಿವೆ. ಬೋನ್‌ನಲ್ಲಿ ಚಿರತೆ ಯಾವುದೇ ಕ್ಷಣದಲ್ಲಿಯಾದರೂ ಸೆರೆಯಾಗುವ ಸಾಧ್ಯತೆಗಳಿವೆ. ಅದಕ್ಕಾಗಿ 10 ಜನ ಅರಣ್ಯ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ ಎಂದು ಹೇಳುತ್ತಾರೆ.

- - -

-31ಕೆಸಿಎನ್‌ಜಿ1, 2ಜೆಪಿಜಿ:

ಚನ್ನಗಿರಿ ತಾಲೂಕಿನ ಹೊಸೂರು ತೋಟದ ಸುವರ್ಣಮ್ಮ ಮನೆ ಬಳಿ ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿದು ಮನೆಯ ಬಳಿ ಸೇರಿರುವ ಗ್ರಾಮಸ್ಥರು.