ಡಿ. 17ಕ್ಕೆ ಮೊದಲ ಬಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಬರೋಬ್ಬರಿ 38 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಇದಕ್ಕಾಗಿ 15ಕ್ಕೂ ಹೆಚ್ಚು ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಲಾಗಿತ್ತು. ಐದು ಕಡೆಗಳಲ್ಲಿ ಪಂಜರ ಅಳವಡಿಸಲಾಗಿತ್ತು.

ಹುಬ್ಬಳ್ಳಿ:

ಅರಣ್ಯ ಇಲಾಖೆಯ ನಿದ್ದೆಗೆಡಿಸಿದ್ದ ಚಿರತೆಯು ಸೋಮವಾರ ರಾತ್ರಿ ವಿಮಾನ ನಿಲ್ದಾಣದಲ್ಲಿನ ನಿರುಪಯುಕ್ತ ಜಾಗೆಯಲ್ಲೆ ಸೆರೆ ಸಿಕ್ಕಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಡಿ. 17ಕ್ಕೆ ಮೊದಲ ಬಾರಿಗೆ ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಬರೋಬ್ಬರಿ 38 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಇದಕ್ಕಾಗಿ 15ಕ್ಕೂ ಹೆಚ್ಚು ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಲಾಗಿತ್ತು. ಐದು ಕಡೆಗಳಲ್ಲಿ ಪಂಜರ ಅಳವಡಿಸಲಾಗಿತ್ತು. ಆಗಾಗ ಟ್ರ್ಯಾಪ್ ಕ್ಯಾಮೆರಾದಲ್ಲಿ ಕಾಣಿಸುತ್ತಿದ್ದ ಚಿರತೆಯೂ ಮಾತ್ರ ಸೆರೆ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆಯಷ್ಟೇ ತುಮಕೂರಿನಿಂದ ತರಿಸಿದ್ದ ಬೃಹತ್ ಗಾತ್ರದ ವಿಶೇಷ ಪಂಜರದೊಳಗೆ ಸೋಮವಾರ ರಾತ್ರಿ ಆಹಾರ ಹುಡುಕಿಕೊಂಡು ಬಂದು ಸಿಲುಕಿಕೊಂಡಿದೆ. ಸಿಸಿಎಫ್ ವಸಂತ ರೆಡ್ಡಿ ಡಿಸಿಎಫ್ ವಿವೇಕ ಕವರಿ, ಎಸಿಎಫ್ ಪರಿಮಳಾ, ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ಸೇರಿದಂತೆ ಹಲವು ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಅರಣ್ಯ ಇಲಾಖೆಯೂ ಅದನ್ನು ಮತ್ತೆ ಕಾಡಿನಲ್ಲಿ ಬಿಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕಳೆದ ವಾರ ಬನ್ನೇರುಘಟ್ಟದ ನ್ಯಾಷನಲ್‌ ಪಾರ್ಕ್‌, ಮೈಸೂರು, ತುಮಕೂರುಗಳಿಂದಲೂ ಚಿರತೆ ಹಿಡಿಯಲು ತಂಡಗಳು ಬಂದಿದ್ದವು. ಧಾರವಾಡ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ, ಪಶು ಸಂಗೋಪನಾ ಹಾಗೂ ಪಶು ವೈದ್ಯಕೀಯ ಸಿಬ್ಬಂದಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಅರವಳಿಕೆ ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ವಿಮಾನ ನಿಲ್ದಾಣದ ಹಿಂದೆ ಸರಿ ಸುಮಾರು 200 ಎಕರೆಗೂ ಅಧಿಕ ಪ್ರಮಾಣದಲ್ಲಿ ನಿರುಪಯುಕ್ತ ಪ್ರದೇಶವಿದೆ. ಈ ಪ್ರದೇಶವನ್ನು ವಿಮಾನ ನಿಲ್ದಾಣ ಬಳಸುವುದೇ ಇಲ್ಲ. ಆದರೆ, ಸುತ್ತಲೂ ಕಾಂಪೌಂಡ್‌ ಇದ್ದು ಅದರೊಳಗೆ ಆಳೆತ್ತರದ ಮುಳ್ಳಿನ ಕಂಠಿ, ವಿವಿಧ ಗಿಡ-ಮರಗಳಿವೆ. ಭಾರೀ ಪ್ರಮಾಣದಲ್ಲಿ ಪೊದೆಗಳುಂಟು. ಇದೇ ಜಾಗದಲ್ಲಿ ಚಿರತೆ ಅವಿತುಕೊಂಡಿತ್ತು. ಇಲ್ಲಿ ಪೊದೆಗಳ ಕಾರಣ ಕಾರ್ಯಾಚರಣೆ ನಡೆಸಲು ಅಡ್ಡಿಯುಂಟಾಗಿತ್ತು. ಈ ನಡುವೆ ಮೈಸೂರಿನಿಂದ ತರಿಸಲಾಗಿದ್ದ ಥರ್ಮಲ್ ಡ್ರೋಣ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಕೂಡ ಕಾಣಿಸಿಕೊಂಡಿತ್ತು. ಚಿರತೆ ಸೆರೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ತೀವ್ರ ಆತಂಕವುಂಟಾಗಿತ್ತು. ಆದಷ್ಟು ಬೇಗನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಅರಣ್ಯ ಇಲಾಖೆ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೀಗ ಚಿರತೆ ಸೆರೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ ವರ್ಗ, ಸಾರ್ವಜನಿಕರು ನೆಮ್ಮದಿಯಿಂದ ನಿಟ್ಟಿಸಿರು ಬಿಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿರುಪಯುಕ್ತ ಪ್ರದೇಶದಲ್ಲಿ ಬೆಳೆದಿರುವ ಪೊದೆಗಳಲ್ಲೇ ಅವಿತುಕೊಂಡಿದ್ದ ಚಿರತೆ ಸೋಮವಾರ ರಾತ್ರಿ ಬಲೆಗೆ ಬಿದ್ದಿದೆ. ಯಾವ ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. 38 ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಆರ್‌.ಎಸ್‌. ಉಪ್ಪಾರ, ವಲಯ ಅರಣ್ಯಾಧಿಕಾರಿ ಹುಬ್ಬಳ್ಳಿ