ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬರನಹಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಚಿರತೆಯೊಂದು ಬಂಧಿಯಾಗಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬರನಹಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಚಿರತೆಯೊಂದು ಬಂಧಿಯಾಗಿದೆ.

ತಾಲೂಕಿನ ಹರಿಕಾರನಹಳ್ಳಿ, ತೋವಿನಕೆರೆ, ಯಲ್ಲದಬಾಗಿ ರಸ್ತೆ, ದೊಂಬರನಹಳ್ಳಿ, ದೊಂಬರನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಜ 2 ರಂದು ದೊಂಬರನಹಳ್ಳಿ ಗ್ರಾಮದ ರೈತ ಚಿಕ್ಕಣ್ಣನವರ ಮೇಕೆಯನ್ನು ಹಾಡುಹಗಲೇ ಮೇಯುವಾಗ ಹಿಡಿದಿತ್ತು. ಈ ವೇಳೆ ಗ್ರಾಮಸ್ಥರ ಕಿರುಚಾಟದಿಂದ ಚಿರತೆ ಮೇಕೆಯನ್ನು ಬಿಟ್ಟು ಪರಾರಿಯಾಗಿತ್ತು. ಜೊತೆಗೆ ದೊಂಬರನಹಳ್ಳಿ ಗೊಲ್ಲರಹಟ್ಟಿಯ ಕುರಿಗಾಯಿಗಳು ಕಾಯುವ ಕುರಿಗಳ ಮೇಲೆ ಚಿರತೆಯ ಉಪಟಳ ಮಿತಿಮೀರಿತ್ತು. ಇದರ ಜೊತೆಗೆ ಹಲವು ಬಾರಿ ಊರಿನಲ್ಲಿದ್ದ ನಾಯಿಗಳನ್ನು ಸಹ ಎಳೆದೊಯ್ದು ತಿಂದಿತ್ತು.

ಇದರಿಂದ ಆತಂಕಗೊಂಡ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ರವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆ ತಂಗುವ ಸ್ಥಳವನ್ನು ಹುಡುಕಿ ಚಿರತೆ ಸೆರೆ ಹಿಡಿಯಲು ಜ 3 ರಂದು ಬೋನನ್ನು ಇಟ್ಟಿದ್ದರು.ನಿನ್ನೆ ರಾತ್ರಿ 8 ರಿಂದ 10 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಒಂದು ತಿಂಗಳ ಅವಧಿಯಲ್ಲಿ ಸೆರೆಯಾಗಿರುವುದು ಇದು ಮೂರನೇ ಚಿರತೆಯಾಗಿದೆ.