ಕನ್ನಡಪ್ರಭ ವಾರ್ತೆ ಜಮಖಂಡಿ
ಒಂದು ವರ್ಷದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ಸಾಕು ಪ್ರಾಣಿಗಳ ಬೇಟೆಯಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ತಾಲೂಕಿನ ಕೆಡಿ ಜಂಬಗಿ ಗ್ರಾಮದಲ್ಲಿ ಚಿರತೆ ಕಾಣಿಸಿ ಕೊಂಡಿತ್ತು. ಗ್ರಾಮಸ್ಥರ ಮಾಹಿತಿಯ ಮೆರೆಗೆ ಅರಣ್ಯ ಅಧಿಕಾರಿಗಳು ಸಿಸಿ ಕ್ಯಾಮರಾ ಹಾಗೂ ಬೋನ್‌ಗಳನ್ನು ಅಳವಡಿಸಿದ್ದರು. ಕೆಡಿ ಜಂಬಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಚಲವಲನ ಗಮನಿಸಿ ಬಲೆ ಬೀಸಿದ್ದರು. ಗ್ರಾಮದ ಜನರು ರಾತ್ರಿ ವೇಳೆ ಸಂಚರಿಸದಂತೆ ಹಾಗೂ ಸಾಕು ಪ್ರಾಣಿಗಳನ್ನು ರಾತ್ರಿ ಸಮಯದಲ್ಲಿ ಸುರಕ್ಷಿತ ಸ್ಥಾನಗಳಲ್ಲಿ ಇರಿಸುವಂತೆ ಸೂಚನೆ ನೀಡಿದ್ದರು.ಭಾನುವಾರ ಕೆಡಿ ಜಂಬಗಿ ಗ್ರಾಮದ ಸುರೇಶ ಮಲಕನ್ನವರ ಅವರ ತೋಟದಲ್ಲಿ ಮತ್ತೆ ಚಿರತೆಯ ಚಲನವಲನಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನ್ ಅಳವಡಿಸಿದ್ದರು. ಸೋಮವಾರ ಬೆಳಗಿನ ಜಾವ ಚಿರತೆ ಬೊನಿಗೆ ಬಿದ್ದಿರುವುದು ದೃಢಪಟ್ಟಿದೆ ಎಂದು ಎ.ಸಿ.ಎಫ್ ಪ್ರದೀಪ ರಾಠೋಡ್ ಮಾಹಿತಿ ನೀಡಿದ್ದಾರೆ. ಇಲಾಖೆ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಎಫ್.ಒ ಕಿರಣ ದಾಸರೆಡ್ಡಿ, ಡಿ.ವೈ.ಆರ್.ಎಫ್.ಒ ಗಳಾದ ಎ.ಬಿ. ಕುಂಬಾರ, ವಿನೋದ ಜೈನಾಪುರ, ಪ್ರವೀಣ್ ಆದಗೊಂಡ, ಬೀಟ್ ಫಾರೆಸ್ಟ್ ಗಾರ್ಡ್ ಪ್ರಕಾಶ ಕರವಾಳಿ ಹಾಗೂ ಸಿಬ್ಬಂದಿಗಳಾದ ನಾಗವೆಣಿ ಹೊಸಮನಿ, ಶ್ರೀದೇವಿ ಪಡೆಪ್ಪಗೋಳ ಸೇರಿದಂತೆ ಇತರರು ಇದ್ದರು.