ತುರುವೇಕೆರೆ ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ.
ತುರುವೇಕೆರೆ : ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಭಾನುವಾರವಷ್ಟೇ ಮಹಿಳೆಯೋರ್ವರನ್ನು ಚಿರತೆ ಕೊಂದಿತ್ತು. ಸೋಮವಾರ ಸಾಯಂಕಾಲ ಬೋನಿಗೆ ಬಿದ್ದಿರುವ ಚಿರತೆ ಭಾನುವಾರ ಮಹಿಳೆಯನ್ನು ಕೊಂದಿದ್ದ ಚಿರತೆಯೇ ಅಥವಾ ಅಲ್ಲವೇ ಎಂಬುದು ವೈಜ್ಞಾನಿಕ ಪರೀಕ್ಷೆಯಿಂದಷ್ಟೇ ತಿಳಿದುಬರಬೇಕಿದೆ.
ಅರೇಮಲ್ಲೇನಹಳ್ಳಿಯ ನಿವಾಸಿ ಸುಜಾತಾರನ್ನು ಚಿರತೆ ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಜಾಗೃತಗೊಂಡಿದ್ದ ಅರಣ್ಯ ಇಲಾಖೆ ಮಹಿಳೆಯನ್ನು ಕೊಂದ ಸ್ಥಳದಲ್ಲಿರುವ ಹುಲಿಕಲ್ ಗುಡ್ಡ ಎಂಬಲ್ಲಿ ಡ್ರೋನ್ ಕ್ಯಾಮರಾ ಬಳಸಿ ಚಿರತೆಯ ಸಂಚಾರವನ್ನು ಗಮನಿಸಲಾಗಿತ್ತು. ಡ್ರೋನ್ ಕ್ಯಾಮರಾದಲ್ಲಿ ಚಿರತೆಯ ಓಡಾಟದ ದೃಶ್ಯ ಕಂಡು ಬಂದ ಬಳಿ ನಿನ್ನೆ ಚಿರತೆಯಿಂದ ಮೃತಪಟ್ಟಿದ್ದ ನಾಯಿಯ ದೇಹವನ್ನು ಬೋನಿನೊಳಗೆ ಇಟ್ಟು ಬಹಳ ನಿಗಾದಿಂದ ವೀಕ್ಷಿಸಲಾಗುತ್ತಿತ್ತು. ಅರಣ್ಯ ಇಲಾಖಾಧಿಕಾರಿಗಳ ಕಾರ್ಯಾಚರಣೆ ಫಲ ನೀಡಿತು. ಸೋಮವಾರ ಸಾಯಂಕಾಲ ಸುಮಾರು 5.40 ರ ವೇಳೆಗೆ ನಾಯಿಯ ಮಾಂಸ ಸೇವಿಸಲು ಬಂದ ಚಿರತೆ ಸಲೀಸಾಗಿ ಬೋನಿನೊಳಗೆ ಸೆರೆಯಾಯಿತು. ಭಾನುವಾರ ಗ್ರಾಮದ ಮಹಿಳೆಯನು ಕೊಂದು ಹಾಕಿದ್ದ ಸಂಗತಿಯಿಂದ ಗಾಭರಿಗೊಂಡಿದ್ದ ಗ್ರಾಮದ ಜನರಿಗೆ ಚಿರತೆಯೊಂದು ಸೆರೆ ಸಿಕ್ಕಿದೆ ಎಂಬ ಸಂಗತಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಆತಂಕ ದೂರವಾಗಿ ಸಮಾಧಾನದ ನಿಟ್ಟುಸಿರುವ ಬಿಟ್ಟರು.