ಸಾರಾಂಶ
ಕರಡಿಗೆರೆಯಲ್ಲಿ ಚಿರತೆ ಮರಿ ಕಳೇಬರ ಪತ್ತೆ
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೆರೆ ಗ್ರಾಮದ ಹೊರವಲಯದಲ್ಲಿ ಚಿರತೆ ಮರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರಡಿಗೆರೆ ಗ್ರಾಮದ ರೈತರು ಭಾನುವಾರ ಬೆಳಗ್ಗೆ ಎಂದಿನಂತೆ ತೋಟಕ್ಕೆ ತೆರಳಿದ ವೇಳೆ ಜವರೇಗೌಡರ ಪಾಳು ಭೂಮಿಯಲ್ಲಿ ಚಿರತೆ ಸಾವನ್ನಪ್ಪಿರುವುದು ಕಂಡು ಬಂದಿತು. ಕೂಡಲೇ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಆರ್ ಎಫ್.ಒ ಅವರಿಗೆ ದೂರು ನೀಡಿದ್ದಾರೆ. ಚಿರತೆ ಸಾವನ್ನಪ್ಪಿರುವ ಘಟನೆ ತಿಳಿಯುತ್ತಿದ್ದಂತೆ ಕರಡಿಗೆರೆ ಆಸುಪಾಸಿನ ಯುವಕರು, ಗ್ರಾಮಸ್ಥರು ಚಿರತೆ ಸಾವನ್ನಪ್ಪಿದ ಸ್ಥಳದಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಬಂಧ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮೃತಪಟ್ಟಿರುವ ಚಿರತೆ ಸುಮಾರು ೬ ತಿಂಗಳ ವಯೋಮಾನದ ಗಂಡು ಚಿರತೆ ಮರಿಯಾಗಿದೆ. ಎರಡೂ ಚಿರತೆಗಳು ಕಿತ್ತಾಡಿಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದರು. ಈ ಬಗ್ಗೆ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದು ಮೃತ ಚಿರತೆ ಕಳೇಬರವನ್ನು ಸುಡಲಾಯಿತೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.