ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಳ್ಳುಹಂದಿ ಜೊತೆ ಕಾದಾಟದ ಬಳಿಕ ನಡೆದ ಚಿರತೆಯೊಂದಿಗಿನ ಹೊಡೆದಾಟದಲ್ಲಿ ಹೆಣ್ಣು ಮರಿ ಚಿರತೆಯೊಂದು ಪ್ರಾಣಬಿಟ್ಟಿರುವ ಘಟನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದಲ್ಲಿ ನಡೆದಿದೆ.

೧ ವರ್ಷದ ಹೆಣ್ಣು ಚಿರತೆ ಮರಿ ಕಳೇಬರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಪತ್ತೆಯಾಗಿದ್ದು, ವಿಷಯ ತಿಳಿದು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಸ್ಥಳ ಪರಿಶೀಲನೆ ಬಳಿಕ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಶು ವೈದ್ಯ ಡಾ. ವಾಸೀಂ ಮಿರ್ಜಾ ಮೃತಪಟ್ಟ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಚಿರತೆಯೊಂದಿಗಿನ ಕಾದಾಟದಲ್ಲಿ ಮರಿ ಚಿರತೆ ಮೃತಪಟ್ಟಿದ್ದು, ಅದರ ಕುತ್ತಿಗೆ ಬಳಿ ಗಾಯವಾಗಿರುವ ಗುರುತು ಪತ್ತೆಯಾಗಿದೆ. ಜೊತೆಗೆ ಮುಳ್ಳುಹಂದಿಯ ಮುಳ್ಳುಗಳು ಪತ್ತೆಯಾಗಿವೆ.

ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ .ನವೀನ್‌ ಕುಮಾರ್‌, ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಿತ, ಎನ್‌ಜಿಒ ರಘುರಾಂ ಹಾಗೂ ಅರಣ್ಯ ಸಿಬ್ಬಂದಿಗಳಿದ್ದರು.


ಮೃತ ಚಿರತೆ ಶವ ಪರೀಕ್ಷೆ ಬಳಿಕ ಚಿರತೆ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು ಎಂದು ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

---

೧೧ಜಿಪಿಟಿ೪

1 ವರ್ಷದ ಚಿರತೆ ಮರಿಯ ಮೃತದೇಹ.