ಡಿ. 17ರಂದು ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಮೊದಲ ಬಾರಿಗೆ ಚಿರತೆ ಸಾರ್ವಜನಿಕರ ಕಣ್ಣಿಗೆ ಕಾಣಿಸಿತ್ತು. ಅದನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಅದು ವೈರಲ್‌ ಕೂಡ ಆಗಿತ್ತು. ಅದಾದ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿತ್ತು.

ಹುಬ್ಬಳ್ಳಿ:

ಇಲ್ಲಿನ ವಿಮಾನ ನಿಲ್ದಾಣ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಕಂಡು ಬಂದು ಆತಂಕ ಹುಟ್ಟಿಸಿದ್ದ ಚಿರತೆ, 3 ವಾರವಾದರೂ ಬೋನಿಗೆ ಬಿದ್ದಿಲ್ಲ. ಇದು ಜನರ ಆತಂಕ ಹೆಚ್ಚಿಸಿದೆ. ಈ ನಡುವೆ ಕಳೆದ 6 ದಿನಗಳಿಂದ ಇತ್ತ ಕಡೆ ಸುಳಿದಿಲ್ಲ. ಹೀಗಾಗಿ ಆತಂಕ ಬೇಡ. ಆದರೆ, ಜಾಗ್ರತರಾಗಿರಿ. ಗಸ್ತು ಕಾರ್ಯವೂ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಡಿ. 17ರಂದು ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಮೊದಲ ಬಾರಿಗೆ ಚಿರತೆ ಸಾರ್ವಜನಿಕರ ಕಣ್ಣಿಗೆ ಕಾಣಿಸಿತ್ತು. ಅದನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಅದು ವೈರಲ್‌ ಕೂಡ ಆಗಿತ್ತು. ಅದಾದ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿತ್ತು. ವಿಮಾನ ನಿಲ್ದಾಣದ ಆವರಣದೊಳಗೆ ಹಾಗೂ ಹಿಂಬದಿಯಲ್ಲಿ ಕಾಡಿನಂತೆ ಇರುವ ಪ್ರದೇಶಗಳಲ್ಲಿ ಎರಡು ಬೋನ್‌ ಹಾಗೂ 11 ಕಡೆ ಟ್ರ್ಯಾಪ್ ಕ್ಯಾಮೆರಾವನ್ನು ಅಳವಡಿಸಿತ್ತು. ಇದಾದ ಬಳಿಕ ತಾರಿಹಾಳ ಕೈಗಾರಿಕಾ ಪ್ರದೇಶ, ರೇಣುಕಾನಗರ, ಗಾಮನಗಟ್ಟಿ, ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧೆಡೆ ಇದರ ಸುಳಿವು ಪತ್ತೆಯಾಗುತ್ತಿತ್ತು. ಬಳಿಕ ಅರಣ್ಯ ಇಲಾಖೆ 3ನೇ ಬೋನ್‌ ಅಳವಡಿಸಿತ್ತು. ಈ ನಡುವೆ ಟ್ರ್ಯಾಪ್‌ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆ ಸಿಕ್ಕಿತ್ತು.

ಡಿ. 31ರ ವರೆಗೆ 3-4 ಬಾರಿ ಚಿರತೆ ತನ್ನ ಇರುವಿಕೆಯ ಕುರುಹನ್ನು ತೋರಿಸಿತ್ತು. ಆದರೆ ಜ. 1ರಿಂದ ಮಾತ್ರ ಚಿರತೆಯ ಸುಳಿವು ಕಂಡು ಬಂದಿರಲಿಲ್ಲ. ಸೋಮವಾರ ಅರಣ್ಯ ಇಲಾಖೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಭದ್ರತಾ ಸಿಬ್ಬಂದಿ 4 ತಂಡಗಳಲ್ಲಿ (30 ಸಿಬ್ಬಂದಿ) ಬೆಳಗ್ಗೆ 11.30ರಿಂದ ಸಂಜೆ 6ರ ವರೆಗೆ ಕೂಂಬಿಂಗ್‌ ಮಾಡಿದರೂ ಸುಳಿವು ಸಿಕ್ಕಿರಲಿಲ್ಲ. ಚಿರತೆ ಲದ್ದಿ ಅಲ್ಲಲ್ಲಿ ಕಂಡು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದು 6 ದಿನಗಳ ಹಿಂದಿನ ಲದ್ದಿ ಎಂಬುದು ಬೆಳಕಿಗೆ ಬಂದಿತ್ತು.

ಹೀಗಾಗಿ ಚಿರತೆ ಇಲ್ಲಿಂದ ಹೊರಟು ಹೋಗಿರುವ ಸಾಧ್ಯತೆ ಇದೆ. ಆದಕಾರಣ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಜಾಗ್ರತರಾಗಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಜತೆಗೆ ಅರಣ್ಯ ಇಲಾಖೆಯೂ ಪ್ರತಿನಿತ್ಯ ಸಂಜೆ 6ರಿಂದ ಬೆಳಗ್ಗೆ ವರೆಗೆ ಗಸ್ತು ಕಾರ್ಯ ಮುಂದುವರಿಸಲಿದೆ. ಒಂದು ವೇಳೆ ಸಾರ್ವಜನಿಕರಿಗೆ ಚಿರತೆ ಕಂಡು ಬಂದಿದ್ದೆಯಾದರೆ ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು ಎಂಬ ಸೂಚನೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ತಿಳಿಸಿದ್ದಾರೆ.ಚಿರತೆಯದ್ದಲ್ಲ: ಅರಣ್ಯ ಇಲಾಖೆ

ಈ ನಡುವೆ ಭೈರಿದೇವರಕೊಪ್ಪದ ಕಾಡಿನಂತಿರುವ ಪ್ರದೇಶದಲ್ಲಿ ಕೆಲವೊಂದಿಷ್ಟು ಹೆಜ್ಜೆ ಗುರುತುಗಳು ಕಂಡು ಬಂದಿವೆ. ಇವು ಕೂಡ ಚಿರತೆಯದ್ದೇ ಇರಬೇಕು ಎಂದು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದನ್ನು ಅರಣ್ಯ ಇಲಾಖೆ ಅಲ್ಲಗೆಳೆದಿದ್ದು, ಅದು ಸೀಳು ನಾಯಿಯ ಹೆಜ್ಜೆ ಗುರುತು ಇರಬಹುದು. ಆದರೆ, ಚಿರತೆಯದ್ದಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.