ಸಾರಾಂಶ
ಸದ್ಯ ರವಿಯವರ ಮನೆ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಅರಣ್ಯ ಇಲಾಖೆಯವರ ಅನುಭವ ಹಾಗೂ ಕಾರ್ಯದಕ್ಷತೆಯಿಂದ ಒಂದೇ ದಿನದಲ್ಲಿ ಬೋನಿಗೆ ಚಿರತೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರಲ್ಲಿ ನಿರಾಳತೆ ಮೂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಹಳೇಕೋಟೆ ಹೋಬಳಿ ಸಿಗರನಹಳ್ಳಿಯ ಗ್ರಾಪಂ ಸದಸ್ಯ ರವಿ ಎಂಬುವರ ಮನೆ ಸಮೀಪ ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ರಾತ್ರಿಯೇ ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿದ್ದ ಆತಂಕ ದೂರವಾಗಿದೆ.ತಾಲೂಕಿನ ಸಿಗರನಹಳ್ಳಿ ಗ್ರಾಮದ ಸಮೀಪ ರಕ್ಷಿತ ಅರಣ್ಯ ಪ್ರದೇಶವಿದ್ದು, ಕಳೆದ ಹಲವಾರು ದಿನಗಳಿಂದ ಹೆಣ್ಣು ಚಿರತೆಯ ಹಾವಳಿ ಅಧಿಕವಾಗಿತ್ತು, ಸುತ್ತ ಮುತ್ತ ಚಿರತೆ ಆಹಾರಕ್ಕಾಗಿ ಪ್ರತಿನಿತ್ಯ ನಾಯಿ, ಕುರಿ, ಮೇಕೆ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿ, ಕೊಂದು ಹಾಕುತ್ತಿದ್ದು, ಇದರಿಂದ ಬಹಳ ತೊಂದರೆಯಾಗುತ್ತಿದೆ. ಜತೆಗೆ ಜೀವಭಯವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು.
ವಲಯ ಅರಣ್ಯಾಧಿಕಾರಿ ದಿಲೀಪ್ ಮಾರ್ಗದರ್ಶನದಲ್ಲಿ ಸಿಗರನಹಳ್ಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಗೂ ರುದ್ರೇಶ್ ಅವರು ಅರಣ್ಯಪಾಲಕರಾದ ರಾಮಚಂದ್ರ, ರಾಮಕೃಷ್ಣರ ಜತೆ ಪರಿಶೀಲನೆ ನಡೆಸಿ, ಗ್ರಾಪಂ ಸದಸ್ಯ ರವಿ ಎಂಬುವರ ಮನೆ ಸಮೀಪ ಹಾಗೂ ಚನ್ನಾಪುರ ಹರೀಶ್ ಎಂಬುವರ ಮನೆ ಸಮೀಪ ಚಿರತೆ ಸೆರೆ ಹಿಡಿಯಲು ೨ ಬೋನ್ ಇಟ್ಟಿದ್ದರು, ಸದ್ಯ ರವಿಯವರ ಮನೆ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಅರಣ್ಯ ಇಲಾಖೆಯವರ ಅನುಭವ ಹಾಗೂ ಕಾರ್ಯದಕ್ಷತೆಯಿಂದ ಒಂದೇ ದಿನದಲ್ಲಿ ಬೋನಿಗೆ ಚಿರತೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರಲ್ಲಿ ನಿರಾಳತೆ ಮೂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.