ಸಾರಾಂಶ
ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಪಂ ವ್ಯಾಪ್ತಿಯ ವದೆಗೋಳ ಗ್ರಾಮದ ಮಾಲ್ಕಿ ಜಮೀನಿನಲ್ಲಿ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬುಧವಾರ ಬೆಳಗ್ಗೆ ಚಿರತೆಯೊಂದು ಬಿದ್ದಿದ್ದು, ಗ್ರಾಮಸ್ಥರಲ್ಲಿನ ಕೊಂಚ ಭಯ ನಿವಾರಣೆಯಾಗಿದೆ.
ಕಳೆದ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದೆ ಎಂದು ವದೆಗೋಳ ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ವದೆಗೋಳ ಗ್ರಾಮದಲ್ಲಿಯೇ ಅಧಿಕಾರಿಗಳು ೨ ಬೋನ್‌ಗಳನ್ನು ಹಾಗೂ ಅಮರಗಟ್ಟಿ, ನಾಗೇಂದ್ರಗಡ ಮತ್ತು ಲಕ್ಕಲಕಟ್ಟಿ ಗ್ರಾಮದಲ್ಲಿ ಬೋನ್ ಇಟ್ಟು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿ ಪಹರೆ ನಡೆಸಿ ಚಿರತೆ ಶೋಧ ಕಾರ್ಯಕ್ಕೆ ಮುಂದಾಗಿದ್ದರು.ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ನಾಯಿ, ಹಸು ಹಾಗೂ ಸಣ್ಣಪುಟ್ಟ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ದೊಡ್ಡ ಪ್ರಮಾಣದಲ್ಲಿ ಈ ಭಾಗದ ಕೆಲ ಗ್ರಾಮಸ್ಥರು ದೂರಿದ್ದರು. ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಸಹ ತಾಲೂಕಿನ ಕಾಲಕಾಲೇಶ್ವರ, ಭೈರಾಪೂರ, ಭೈರಾಪೂರ ತಾಂಡಾ, ಜೀಗೇರಿ, ನಾಗೇಂದ್ರಗಡ, ಅಮರಗಟ್ಟಿ, ಲಕ್ಕಲಕಟ್ಟಿ ಸೇರಿ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಶೋಧ ಕಾರ್ಯಕ್ಕೆ ಮುಂದಾಗಿದ್ದರು. ಕೆಲ ದಿನಗಳಲ್ಲಿ ಭೈರಾಪೂರ ತಾಂಡಾದಲ್ಲಿ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನಿಗೆ ಕೆಡವಿದ್ದರು. ಅದೇ ಸಂದರ್ಭದಲ್ಲಿ ಭೈರಾಪೂರ ತಾಂಡಾದ ಗ್ರಾಮಸ್ಥರು ಇನ್ನೂ ೨-೩ ಚಿರತೆಗಳಿದ್ದು ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಕೆಲ ದಿನಗಳ ಕಾಲ ಭೈರಾಪೂರ ತಾಂಡಾ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದಾಗ ಚಿರತೆಗಳು ಓಡಾಟದ ಗುರುತು ಪತ್ತೆಯಾಗದ್ದರಿಂದ ಚಿರತೆ ಶೋಧ ಕಾರ್ಯ ಅಧಿಕಾರಿಗಳು ಸಣ್ಣದಾಗಿ ಕೈಬಿಟ್ಟಿದ್ದರು. ಆದರೆ ಜೀಗೇರಿ ಗ್ರಾಮದ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ನಡೆಸಿದ್ದ ದಾಳಿಯು ಗ್ರಾಮಸ್ಥರು ಹಾಗೂ ರೈತಾಪಿ ವರ್ಗದಲ್ಲಿ ಚಿರತೆಯ ಭಯ ಆವರಿಸುವಂತೆ ಮಾಡಿತ್ತು. ಪರಿಣಾಮ ಅರಣ್ಯ ಅಧಿಕಾರಿಗಳ ವಿವಿಧ ತಂಡ ರಚಿಸಿ ಡ್ರೋಣ ಬಳಸಿ ಚಿರತೆ ಶೋಧ ನಡೆಸಿದರೂ ಸಹ ಚಿರತೆ ಪತ್ತೆಯಾಗಿರಲಿಲ್ಲ. ಅಂದಿನಿಂದ ಇಂದಿನವರೆಗೂ ಸಹ ಈ ಭಾಗದ ಜನರು ಹಾಗೂ ರೈತ ಸಮೂಹವು ಹೊಲದಲ್ಲಿ ಹಾಗೂ ಗುಡ್ಡದಲ್ಲಿ ಚಿರತೆ ನೋಡಿದ್ದೇವೆ ಎಂದಾಗೊಮ್ಮೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಬೋನು ಇರಿಸಿ ಚಿರತೆ ಸೆರೆಗಾಗಿ ಗುಡ್ಡಗಾಡು ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಾ ಬರುತ್ತಿದ್ದಾರೆ. ಆದರೆ ಬುಧವಾರ ಬೆಳಗ್ಗೆ ಚಿರತೆಯು ಬೋನಿಗೆ ಬಿದ್ದಿದ್ದನ್ನು ಕಂಡಿರುವ ಗ್ರಾಮಸ್ಥರು ಒಂದು ಚಿರತೆ ಬೋನಿಗೆ ಬಿದ್ದಿದೆ. ಆದರೆ ಇನ್ನೊಂದು ಚಿರತೆ ಇದ್ದು, ಅದನ್ನು ಸಹ ಸೆರೆ ಹಿಡಿಯಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ವೇಳೆ ಪ್ರವೀಣಕುಮಾರ ಸಾಸಿವಿಹಳ್ಳಿ, ಸಹಾಯಕ ಪಶು ವೈದ್ಯಾಧಿಕಾರಿ ನಿಖಿಲ್ ಕುಲಕರ್ಣಿ ಸೇರಿದಂತೆ ಗದಗ ಜೂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.ತಾಲೂಕಿನಲ್ಲಿ ಚಿರತೆ ಹಾವಳಿಯು ರೈತ ಸಮೂಹ ಹಾಗೂ ಗ್ರಾಮಸ್ಥರಲ್ಲಿ ಆತಂಕಕ್ಕೆ ಮನೆ ಮಾಡಿದೆ. ಗಜೇಂದ್ರಗಡ ತಾಲೂಕಿನ ಗುಡ್ಡಗಾಡು ಪ್ರದೇಶದ ಗಡಿ ಗ್ರಾಮದವಾದ ನೆರೆಯ ಕುಷ್ಟಗಿ ತಾಲೂಕಿನ ಗಡಚಿಂತಿ ಗ್ರಾಮದಲ್ಲಿ ಚಿರತೆ ಸೆರೆಯಾಗಿತ್ತು. ಬಳಿಕ ಭೈರಾಪೂರ ತಾಂಡಾ ಹಾಗೂ ಈಗ ವದೆಗೋಳ ಗ್ರಾಮದಲ್ಲಿ ಬೋನಿಗೆ ಚಿರತೆ ಬಿದ್ದಿದೆ. ಆದರೆ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಚಿರತೆಗಳಿವೆ ಎಂದು ಗಟ್ಟಿಯಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಹೀಗಾಗಿ ಚಿರತೆಗಳು ಇನ್ನೂ ಎಷ್ಟಿವೆ ಅಥವಾ ಇಲ್ಲ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆಯೇ ಉತ್ತರ ನೀಡಬೇಕಿದೆ.
ಪಟ್ಟಣ ಸಮೀಪದ ವದೆಗೋಳ ಗ್ರಾಮದಲ್ಲಿ ಚಿರತೆ ಸೆರೆಗಾಗಿ ೨ಬೋನ್‌ಗಳನ್ನು ಇರಿಸಲಾಗಿತ್ತು. ಒಂದರಲ್ಲಿ ಚಿರತೆ ಸಿಕ್ಕಿದೆ. ಗ್ರಾಮಸ್ಥರು ೨ ಚಿರತೆಗಳ ಓಡಾಟ ನೋಡಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಶೋಧ ಕಾರ್ಯ ಮುಂದುವರೆಸಲಾಗುವುದು ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.