ಸಾರಾಂಶ
ಬ್ಯಾಡಗಿ: ತಾಲೂಕಿನ ಕಲ್ಲೇದೇವರು, ಅಳಲಗೇರಿ, ಕನವಳ್ಳಿ, ಮೋಟೆಬೆನ್ನೂರು ಬಳಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು, ಕಳೆದ ನಾಲ್ಕು ದಿನಗಳಿಂದ ರೈತರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯಾಧಿಕಾರಿಗಳ ಕೂಡಲೇ ಭೇಟಿ ನೀಡಿ, ಮುಂಜಾಗೃತಾ ಕ್ರಮ ಕೈಗೊಂಡು ಗ್ರಾಮಸ್ಥರಲ್ಲಿರುವ ಆತಂಕ ದೂರ ಮಾಡಬೇಕಿದೆ.
ರೈತರು ಹಾಗೂ ಕೂಲಿಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ತಮ್ಮ ಜಾನುವಾರುಗಳೊಂದಿಗೆ ತೆರಳಲು ತೀವ್ರ ಹಿಂದೇಟು ಹಾಕುತ್ತಿದ್ದು, ಜಾನುವಾರುಗಳನ್ನು ಮೇಯಿಸಲು ತೆರಳದಂತಾಗಿದೆ.ಹಿರೇಕೆರೂರು, ಬ್ಯಾಡಗಿ, ಹಾವೇರಿ ತಾಲೂಕಿನ ಕೆಲ ಪ್ರದೇಶದ ಗುಡ್ಡಗಾಡುಗಳಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ತೀವ್ರ ಅಂಜಿಕೆ ಉಂಟು ಮಾಡುತ್ತಿದೆ. ಮಳೆಗಾಲ ಆರಂಭವಾಗುವ ಮುನ್ನವೆ, ಬೀಜ ಬಿತ್ತನೆಗೆ ಹೊಲಗಳಲ್ಲಿ ಜಾನುವಾರು, ಕುರಿಮರಿಗಳೊಂದಿಗೆ ರೈತರು ತೆರಳಲು ಭಯಪಡುತ್ತಿದ್ದು, ಅಲ್ಲಲ್ಲಿ ಚಿರತೆಯಕಾಟ ಶುರುವಾಗಿದ್ದು, ಚಿರತೆ ಹೊಲದಲ್ಲಿ ಓಡಾಡಿದ ಹೆಜ್ಜೆಗಳ ಗುರ್ತಿನಿಂದ ರೈತರಲ್ಲಿ ಆತಂಕ ಇಮ್ಮಡಿಯಾಗಿದೆ. ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಆತಂಕ ಉಂಟು ಮಾಡುತ್ತಿರುವ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ತಾಲೂಕಿನ ಕಾಟೇನಹಳ್ಳಿ, ಕೆರೂಡಿ, ಶಿಡೇನೂರು ಹಾಗೂ ಕದರಮಂಡಲಗಿ, ಕಲ್ಲೆದೇವರು ಸುತ್ತಮುತ್ತಲು ಚಿರತೆ ಓಡಾಡುತ್ತಿದ್ದು, ಈ ಹಿಂದೆ ಕದರಮಂಡಲಗಿಯಲ್ಲಿ ಜಿಂಕೆ, ಕಾಟೇನಹಳ್ಳಿ, ಶಿಡೇನೂರಿನಲ್ಲಿ ಕುರಿಗಳು, ಮೋಟೆಬೆನ್ನೂರಿನಲ್ಲಿ ನಾಯಿ ಹಾಗೂ ಕರುವನ್ನುತಿಂದು ಹಾಕಿದ್ದವು. ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಹಗಲು ಹೊತ್ತಲ್ಲಿ ಮಲಗಿದ್ದ ಚಿರತೆ ದೃಶ್ಯ ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ತಾಲೂಕಿನ ಉತ್ತರ ಭಾಗದಲ್ಲಿ ರಾಣಿಬೆನ್ನೂರು ಕೃಷ್ಣಮೃಗ ಅಭಿಯಾರಣ್ಯ ಹೊಂದಿಕೊಂಡಿದ್ದು, ಸಾಕಷ್ಟು ಜಿಂಕೆ, ಕೃಷ್ಣಮೃಗಳಿದ್ದು, ಅವುಗಳನ್ನು ಭಕ್ಷಿಸಲು ಇಲ್ಲಿ ಓಡಾಡುತ್ತಿವೆ ಎನ್ನಲಾಗುತ್ತಿದೆ. ಹೀಗಾಗಿ ಊರ ಹೊರಗಿನ ಮನೆಗಳಲ್ಲಿ ಸಾಕು ಪ್ರಾಣಿಗಳನ್ನು ಕಟ್ಟಲು ಭಯಪಡುತ್ತಿದ್ದಾರೆ. ರೈತರಿಗೆ ಒಂದುಕಡೆ ಮಳೆ ಬೆಳೆ ಚಿಂತೆಯಾದ್ರೆ ಇನ್ನೊಂದೆಡೆ ಚಿರತೆ ಓಡಾಟ ದೊಡ್ಡ ಕಾಟವಾಗಿದ್ದು, ತೀವ್ರ ಬೇಸತ್ತಿದ್ದಾರೆ.ಚಿರತೆ ಎಲ್ಲಿ ಅಡಗಿದೆ ಎನ್ನುವ ಭಯ:
ರಾತ್ರಿ ಹೊತ್ತಲ್ಲಿ ಹೊಲಗಳಿಗೆ ರೈತರು ತೆರಳಲು ಸ್ವಲ್ಪ ಹಿಂದೇಟು ಹಾಕುತ್ತಿದ್ದು, ಕೂಲಿಕಾರ್ಮಿಕರು ಅಂಜಿಕೆಯಿಂದ ತೆರಳುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಚಿರತೆ ಈ ಪ್ರದೇಶದಿಂದ ಹೊರಹೋಗಿದೆ ಎನ್ನುವ ಸ್ಪಷ್ಟ ಸಂದೇಶ ಸಿಗುವವರೆಗೂ ರೈತರಲ್ಲಿ ಆತಂಕ ದೂರವಾಗಲು ಸಾಧ್ಯವಿಲ್ಲ. ಇನ್ನಾದರೂ ಅರಣ್ಯಾಧಿಕಾರಿಗಳು ಎಚ್ಚೆತ್ತು ಕಾರ್ಯನಿರ್ವಹಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.ಹೆಜ್ಜೆಗುರ್ತಿನ ವಿಡಿಯೋ ವೈರಲ್: ಮೋಟೆಬೆನ್ನೂರು, ಅಳಲಗೇರಿ, ಕಾಕೋಳ ಸುತ್ತಮುತ್ತ ಚಿರತೆ ಹೆಜ್ಜೆ ಹಾಗೂ ಕುರಿ, ನಾಯಿಯನ್ನುತಿಂದು ಹಾಕಿರುವ ಕುರಿತು ವಿಡಿಯೋ ತುಣುಕು ಓಡಾಡುತ್ತಿದೆ. ಇದನ್ನು ಆಧರಿಸಿ ಎಚ್ಚೆತ್ತುಕೊಂಡ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕೈಗೊಂಡಿದ್ದು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ಸೆರೆಹಿಡಿಯಲು ಕಲ್ಲೆದೇವರ, ಮೋಟೆಬೆನ್ನೂರು ಹಾಗೂ ಅಳಲಗೇರಿ ಬಳಿ ಬೋನು ಅಳವಡಿಸಲಾಗಿದೆ. ಸಾರ್ವಜನಿಕರು ಭಯಪಡದೆ, ಚಿರತೆ ಓಡಾಟ ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕು. ಪ್ರಾಣಿಗಳನ್ನು ತಿಂದು ಹಾಕಿರುವುದು ಕಂಡುಬಂದಲ್ಲಿ ಸಿಬ್ಬಂದಿಗಳಿಗೆ ಗಮನಕ್ಕೆ ತನ್ನಿ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಂ. ಅಣ್ಣಪ್ಪ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗೆ ದೂರು: ವರ್ಷದ ಹಿಂದೆ ಇಲ್ಲಿನ ವಲಯ ಅರಣ್ಯಾಧಿಕಾರಿಗಳು ವರ್ಗಾವಣೆಯಾಗಿದ್ದು, ಇವರ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿ ವರ್ಗಾವಣೆಯಾಗಿದ್ದು ಈವರೆಗೂ ಬಂದು ಹಾಜರಾಗಿಲ್ಲ. ಹೀಗಾಗಿ ಸಾರ್ವಜನಿಕರು ಕಚೇರಿಗೆ ಓಡಾಡುವುದು ತಪ್ಪಿಲ್ಲ. ಈಗ ರಾಣಿಬೆನ್ನೂರಿನ ಸಾಮಾಜಿಕ ವಲಯ ಅರಣ್ಯಾಧಿಕಾರಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲವೆಂದು ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಪ್ರತಿಭಟನೆಗಳಲ್ಲಿ ಒತ್ತಾಯಿಸಿದರೂ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.