ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿ ಪ್ರದೇಶದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಇದರಿಂದ ಆ ಪ್ರದೇಶಗಳ ಜನರು, ರೈತರು ಹೊಲ, ಗದ್ದೆ, ತೋಟಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
- ಮಟ್ಟೀರ ಪುಟ್ಟಣ್ಣರ ತೋಟದ ಮನೆ ಬಳಿ ರಾತ್ರಿ ದಾಳಿ । ಸಿಸಿಟಿವಿಯಲ್ಲಿ ದೃಶ್ಯ ಸೆರೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಬಸವಾಪಟ್ಟಣ ಹೋಬಳಿ ಪ್ರದೇಶದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಇದರಿಂದ ಆ ಪ್ರದೇಶಗಳ ಜನರು, ರೈತರು ಹೊಲ, ಗದ್ದೆ, ತೋಟಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಪುಣ್ಯಸ್ಥಳ ಸಮೀಪದ ಮಟ್ಟೀರ ಪುಟ್ಟಣ್ಣ ಎಂಬುವರ ತೋಟದ ಮನೆಯೊಳಗೆ ರಾತ್ರಿ ಚಿರತೆ ನುಗ್ಗಿ ಮನೆಯ ಮುಂದೆ ಇದ್ದ ಸಾಕುನಾಯಿಯನ್ನು ಕಚ್ಚಿಕೊಂಡು ಹೋಗಿದೆ. ಈ ಭಯಾನಕ ದೃಶ್ಯ ಮನೆಯ ಸಿ.ಸಿ. ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಮೂರು, ನಾಲ್ಕು ವರ್ಷಗಳಿಂದ ಸೂಳೆಕೆರೆ, ಹೊಸಹಳ್ಳಿ, ಹೊಸನಗರ, ಪುಣ್ಯಸ್ಥಳ, ಕಂಚುಗಾರನಹಳ್ಳಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಸಂಚರಿಸುತ್ತಿದೆ. ವಾಹನ ಸವಾರರು, ಪಾದಚಾರಿಗಳು ಭಯದಿಂದಲೇ ಸಂಚರಿಸುವಂತಾಗಿದೆ. ಸೂಳೆಕೆರೆಯಿಂದ ಬಸವಾಪಟ್ಟಣಕ್ಕೆ ಹಾದುಹೋಗುವ ರಸ್ತೆಯಲ್ಲಿ ಚಿರತೆ ಓಡಾಡುವುದು, ರಸ್ತೆಯನ್ನು ದಾಟುತ್ತಿರುವುದನ್ನು ವಾಹನ ಸವಾರರು ನೋಡಿದ್ದಾರೆ. ರಾತ್ರಿಯಾಯಿತೆಂದರೆ ಒಬ್ಬರೇ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ.ಕಳೆದ 15 ದಿನಗಳ ಹಿಂದೆ ಕಂಚುಗಾರನಹಳ್ಳಿ ಸಿದ್ದೇಶ್ ಎಂಬವರ ಮನೆಯಲ್ಲಿದ್ದ ಸಾಕುನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗಿದೆ. ಹೀಗೆ ದಿನ ಬಿಟ್ಟು ದಿನ ಈ ಪ್ರದೇಶದ ಸುತ್ತಮುತ್ತಲ ಗ್ರಾಮಗಳ ಬೀದಿನಾಯಿಗಳು ಕಣ್ಮರೆ ಆಗುತ್ತಿರುವುದು ಚಿರತೆಯ ಸಂಚಾರ ಸೂಚಿಸುತ್ತದೆ ಎಂದು ಆ ಪ್ರದೇಶದ ರೈತ ರಾಜಣ್ಣ ಹೇಳುತ್ತಾರೆ.
ಈ ಚಿರತೆಯು ಕಳೆದ ಕೆಲವು ತಿಂಗಳ ಹಿಂದೆ ಕೆರೆಬಿಳಚಿ ಗ್ರಾಮದ ಭದ್ರಾನಾಲೆಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೋಟಕ್ಕೆ ಹೋಗುತ್ತಿದ್ದ ಇಬ್ಬರು ರೈತರ ಮೇಲೆ ದಾಳಿ ಮಾಡಿತ್ತು. ಈ ರೈತರು ಚಿರತೆಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.- - -
(ಬಾಕ್ಸ್) * ಚಿರತೆ ಸೆರೆಹಿಡಿಯಲು ಬೋನ್‌ಗಳ ಅಳವಡಿಕೆಈ ಅರಣ್ಯ ಪ್ರದೇಶವು ಮಾವಿನಕಟ್ಟೆ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಈಗಾಗಲೇ ಕೆರೆಬಿಳಚಿ ಬಳಿಯ ಆಯಕಟ್ಟಿನ ಸ್ಥಳದಲ್ಲಿ ಚಿರತೆಯನ್ನು ಸೆರೆಹಿಡಿಯುವ ಬೋನ್ ಅಳವಡಿಸಲಾಗಿದೆ. ಪ್ರಸ್ತುತವಾಗಿ ಭಾನುವಾರ ಸಂಜೆಯಿಂದ ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಯನ್ನು ಸೆರೆಹಿಡಿಯುವ 2 ಬೋನ್‌ಗಳನ್ನು ಅಳವಡಿಸಲಾಗುವುದು ಎಂದು ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶದ ಫಾರೆಸ್ಟರ್ ಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.- - -
-26ಕೆಸಿಎನ್ಜಿ1, 2:ಚನ್ನಗಿರಿ ತಾಲೂಕಿನ ಪುಣ್ಯಸ್ಥಳ ಸಮೀಪದ ಮಟ್ಟೀರ ಪುಟ್ಟಣ್ಣ ಎಂಬವರ ತೋಟದ ಮನೆಯೊಳಗೆ ರಾತ್ರಿ ಚಿರತೆ ನುಗ್ಗಿ ಸಾಕುನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ.