ಕುಂಟೋಜಿ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟ;ಆತಂಕ

| Published : Mar 30 2024, 12:47 AM IST

ಕುಂಟೋಜಿ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟ;ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಚಿರತೆ ಓಡಾಟ ನಡೆಸಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಉಪ ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ, ಘಟನೆಯ ಕುರಿತು ಮಾಹಿತಿ ರವಾನಿಸಿದ್ದು, ಒಂದ್ ಬೋನ್ ತರಿಸಲಾಗಿದೆ

ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ಬೆಣಚಮಟ್ಟಿ ಗುಡ್ಡಗಾಡು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ್ಕೆ ಕಾರಣವಾಗಿದ್ದು, ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಪಟ್ಟಣ ಸೇರಿ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿನ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿದ್ದು, ಅವಘಡ ಸಂಭವಿಸುವ ಮೊದಲು ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿದ್ದವು. ಆದರೆ ಇತ್ತಿಚೆಗೆ ಜೀಗೇರಿ ಗ್ರಾಮದ ಬಾಳೆತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ಈಗ ಕುಂಟೋಜಿ ಗ್ರಾಮದ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದ್ದು ಕುಂಟೋಜಿ, ಗೌಡಗೇರಿ, ಬೆಣಚಮಟ್ಟಿ ಹಾಗೂ ಬೆಣಚಮಟ್ಟಿ ತಾಂಡಾ ಸೇರಿ ಕೆಲ ಗ್ರಾಮಗಳಲ್ಲಿ ಚಿರತೆ ದಾಳಿಯ ಆತಂಕ ಮನೆ ಮಾಡಿದೆ.

ಪಟ್ಟಣ ಸೇರಿ ಕಾಲಕಾಲೇಶ್ವರ, ಜೀಗೇರಿ, ಭೈರಾಪೂರ, ಕುಂಟೋಜಿ, ಬೈರಾಪೂರ ತಾಂಡಾ, ವದೆಗೋಳ, ಬೆಣಚಮಟ್ಟಿ, ನಾಗೇಂದ್ರಗಡ, ಕಲ್ಲಿಗನೂರು ಸೇರಿ ಅನೇಕ ಗ್ರಾಮಗಳ ಸುತ್ತಲು ಬೆಟ್ಟವು ದಟ್ಟವಾಗಿರುವ ಪರಿಣಾಮ ೩-೪ ಚಿರತೆಗಳು ಇವೆ ಎನ್ನುವ ಗ್ರಾಮಸ್ಥರ ಮಾತುಗಳಿಗೆ ಪೂರಕ ಎನ್ನುವಂತೆ ಬೈರಾಪೂರ ತಾಂಡಾದಲ್ಲಿ ಕಳೆದ ವರ್ಷ ಚಿರತೆ ಸೆರೆಯಾಗಿತ್ತು. ಬಳಿಕ ಕೆಲ ಗ್ರಾಮಗಳಲ್ಲಿ ಚಿರತೆ ಓಡಾಟ ನಡೆಸಿ ದನ, ನಾಯಿ ಸೇರಿ ಅನೇಕ ಪ್ರಾಣಗಳ ಮೇಲೆ ದಾಳಿ ಮಾಡುತ್ತಿದ್ದು ಚಿರತೆ ಸೆರೆಹಿಡಿಯುಂತೆ ಆಗ್ರಹಗಳು ಕೇಳಿ ಬಂದಿದ್ದವು. ಪರಿಣಾಮ ಅಧಿಕಾರಿಗಳು ಸಹ ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಾಗಲೆಲ್ಲ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವ ಕಾರ್ಯ ನಡೆಸಿದ್ದರೂ ಸಹ ಅದು ಸಫಲವಾಗಿರಲಿಲ್ಲ. ಪರಿಣಾಮ ಫೆಬ್ರುವರಿ ತಿಂಗಳಲ್ಲಿ ಚಿರತೆ ಬಾಳೆತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಕುರಿಗಾಹಿ ಮೇಲೆ ಪ್ರತ್ಯೇಕವಾಗಿ ಚಿರತೆ ದಾಳಿ ನಡೆಸಿದ ಬಳಿಕ ಅರಣ್ಯ ಇಲಾಖೆ ೩ ತಂಡಗಳ ಜತೆಗೆ ಡ್ರೋಣ ಮೂಲಕ ಚಿರತೆ ಶೋಧ ಹಾಗೂ ಸೆರೆಹಿಡಿಯಲು ಪಟ್ಟಿದ್ದ ಹರಸಾಹಸವು ಸಹ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಈಗ ಕುಂಟೋಜಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಓಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾಣರವಾಗಿದ್ದು ಕುಂಟೋಜಿ ಸೇರಿ ಸುತ್ತಲಿನ ಗ್ರಾಮಗಳ ಜನತೆ ಹಾಗೂ ರೈತಾಪಿ ವರ್ಗದಲ್ಲಿ ಜೀವ ಭಯಕ್ಕೆ ಕಾರಣವಾಗಿದ್ದು,ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯಬೇಕು ಎಂಬ ಆಗ್ರಹಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.

ಚಿರತೆ ಓಡಾಟ ನಡೆಸಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಉಪ ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ, ಘಟನೆಯ ಕುರಿತು ಮಾಹಿತಿ ರವಾನಿಸಿದ್ದು, ಒಂದ್ ಬೋನ್ ತರಿಸಲಾಗಿದೆ. ಚಿರತೆ ಶೋಧಕ್ಕೆ ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.