ಸಾರಾಂಶ
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಮತ್ತೆ ಚಿರತೆಪ್ರತ್ಯಕ್ಷವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಮತ್ತೆ ಚಿರತೆಪ್ರತ್ಯಕ್ಷವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಕಬ್ಬಿನ ಗದ್ದೆ ಮತ್ತು ದನಗಳ ಶೆಡ್‌ಬಳಿ ಚಿರತೆಯ ಹೆಜ್ಜೆಗುರುತುಗಳು ಕಂಡು ಬಂದಿದ್ದು ರೈತರು ಗಾಬರಿಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿದರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು ಹಾಗೂ ಮೂರು ಆಡಿನ ಮರಿಗಳನ್ನು ಕೊಂದು ಹಾಕಿತ್ತು. ಅದನ್ನು ಹಿಡಿಯಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಅದೇ ಚಿರತೆ ಚಿಕ್ಕಪಡಸಲಗಿ ಗ್ರಾಮದತ್ತ ಬಂದಿರಬಹುದು ಎಂದು ಅರಣ್ಯ ಅಧಿಕಾರಿ ಕಿರಣ ದಾಸರೆಡ್ಡಿ ಮಾಹಿತಿ ನೀಡಿದ್ದಾರೆ.
ಚಿಕ್ಕಪಡಸಲಗಿ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು ಚಿರತೆಯ ಸೆರೆ ಹಿಡಿಯಲು 2 ಬೋನ್‌ಗಳನ್ನು ಅಳವಡಿಸಲಾಗಿದೆ. ನಾಲ್ಕುಜನ ಸಿಬ್ಬಂದಿಯನ್ನು ಹಗಲು ಮತ್ತು ರಾತ್ರಿ ಪಾಳಯದಲ್ಲಿ ಕಾವಲಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದ್ದು, ಚಿರತೆ ಪತ್ತೆ ಮತ್ತು ಸೆರೆ ಹಿಡಿಯಲು ಎಲ್ಲಾ ಕ್ರಮಗಳನ್ನು ಜರುಗಿಸಲಾಗಿದೆ. ಜನ, ಜಾನುವಾರು ಎಚ್ಚರಿಕೆಯಿಂದ ಇರಲು ಅರಣ್ಯ ಅಧಿಕಾರಿ ಕಿರಣ ಮನವಿ ಮಾಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮಾತ್ರ ಸಂಚರಿಸುವ ಚಿರತೆ ಬೋನಿಗೆ ಬೀಳುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ರಾತ್ರಿ ಹೊತ್ತಿನಲ್ಲಿ ಸಂಚಾರ ಮಾಡುವುದನ್ನು ಕಡಿಮೆ ಮಾಡಬೇಕು ಮತ್ತು ಗುಂಪಿನಲ್ಲಿ ಸಂಚರಿಸಬೇಕು. ಜಾನುವಾರುಗಳನ್ನು ಸುರಕ್ಷಿತವಾಗಿ ಕೊಟ್ಟಿಗೆಗಳಲ್ಲಿ ಕಟ್ಟಬೇಕೆಂದು ತಿಳಿಸಿದ್ದಾರೆ. ಇಲಾಖೆಯವರು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ಚಿರತೆಯನ್ನು ಸೆರೆ ಹಿಡಿಯಲಾಗುವುದು. ಸ್ಥಳಕ್ಕೆ ಸಾವಳಗಿ ಠಾಣೆಯ ಪಿಎಸ್‌ಐ ಶಿವಾನಂದ ಶಿಂಗನ್ನವರ ಮತ್ತು ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.