ಸಾರಾಂಶ
ಹನೂರು ತಾಲೂಕಿನ ಬೂದಿಪಡುಗ ಹಾಗೂ ಹೊಸದೊಡ್ಡಿ ಗ್ರಾಮದ ಅರಣ್ಯದಂಚಿನಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿರುವುದು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಪಿ.ಜಿ.ಪಾಳ್ಯ ಬೀಟ್ ಒಳಪಡುವ ಬೂದಿಪಡುಗ ಹೊಸದೊಡ್ಡಿ ಮಾರ್ಗಮಧ್ಯ ಚಿರತೆಯೊಂದು ರಾತ್ರಿ 11.30ಕ್ಕೆ ರಸ್ತೆ ದಾಟುತ್ತಿರುವ ಬಗ್ಗೆ ಇದೇ ಮಾರ್ಗವಾಗಿ ಬಂದಂತ ವಾಹನ ಸವಾರರೊಬ್ಬರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟು, ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡಿದ್ದಾರೆ.ಲೈಟ್ ಬೆಳಕು ನೋಡಿ ಓಡಿ ಹೋದ ಚಿರತೆ:
ರಾತ್ರಿ 11.30ಕ್ಕೆ ಬೂದಿ ಪಡಗ ಹಾಗೂ ಹೊಸದೊಡ್ಡಿ ಈ ಮಾರ್ಗದಲ್ಲಿಯೇ ಅರಣ್ಯ ಪ್ರದೇಶದ ರಸ್ತೆ ಬದಿ ಚಿರತೆ, ಕುಳಿತಿರುವ ಬಗ್ಗೆ ವಾಹನ ಸವಾರರು ಲೈಟ್ ಬೆಳಕಿನಲ್ಲಿ ಚಿರತೆ ಇರುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಂತೆ ವಾಹನದ ಲೈಟ್ ಬೆಳಕು ಕಂಡು ರಸ್ತೆ ಮಧ್ಯದಲ್ಲಿಯೇ ಚಿರತೆ ಓಡಿ ಹೋಗಿದೆ.ವಾಹನ ಸವಾರರಿಗೆ ಆತಂಕ:
ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಒಡೆಯರ್ ಪಾಳ್ಯ ತಮಿಳುನಾಡು ಹಾಗೂ ಗಡಿ ಗ್ರಾಮ ಪಿಜಿ ಪಾಳ್ಯ ಹಾಗೂ ವಿವಿಧ ಗ್ರಾಮದ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಭಾಗದಲ್ಲಿ ಹಲವಾರು ದಿನಗಳಿಂದ ಜಮೀನುಗಳಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿ ತಿನ್ನುತ್ತಿರುವ ಬಗ್ಗೆ ಹಲವಾರು ಪ್ರಕರಣಗಳು ನಡೆದಿದ್ದವು. ಈ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ವಾಹನ ಸವಾರರಿಗೆ ಆತಂಕವುಂಟು ಮಾಡಿದೆ.ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಠಿ:
ಚಿರತೆ ಸಾಕು ಪ್ರಾಣಿಗಳನ್ನು ತಿಂದ ಘಟನೆ ಮಾಸುವ ಮುನ್ನವೇ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಓಡಾಡುವುದನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದರಿಂದ ಗ್ರಾಮಸ್ಥರು ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತರು ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ, ಕರಪತ್ರ ಮೂಲಕ ಅರಿವು ಮೂಡಿಸಬೇಕೆಂಬುದು ಪ್ರಾಣಿ ಪ್ರಿಯರು ಒತ್ತಾಯವಾಗಿದೆ.ವಾಹನ ಸವಾರರಿಗೆ ಎಚ್ಚರಿಕೆ ಮನವಿ:
ನಿತ್ಯ ಈ ಭಾಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಬೈಕ್‌ನಲ್ಲಿ ರೈತರು, ಗ್ರಾಮಸ್ಥರು ಹಗಲು, ರಾತ್ರಿ ಎನ್ನದೆ ಓಡಾಡುತ್ತಿದ್ದು, ಈ ರಸ್ತೆಯಲ್ಲಿ ಚಿರತೆ ಕಂಡುಬಂದಿರುವುದರಿಂದ ಗ್ರಾಮಸ್ಥರು, ರೈತರು ಎಚ್ಚರಿಕೆಯಿಂದ ಓಡಾಡಬೇಕು. ಜೊತೆಗೆ ಒಬ್ಬೊಬ್ಬರೇ ಈ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಅನಾಹುತ ಸಂಭವಿಸುವ ಮುನ್ನ ಜಾಗೃತರಾಗಿರುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.