ಬೆಂಗಳೂರು ಸಿಂಧಿ ಶಾಲೆಯಲ್ಲಿ ತಮನ್ನಾ ಕುರಿತ ಪಾಠ: ವಿವಾದ

| Published : Jun 27 2024, 01:32 AM IST / Updated: Jun 27 2024, 09:48 AM IST

Actress Tamannaah

ಸಾರಾಂಶ

ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತ ಪಾಠವನ್ನು ಪರಿಚಯಿಸಿದ್ದು, ಶಾಲಾ ಆಡಳಿತ ಮಂಡಳಿಯ ಕ್ರಮಕ್ಕೆ ಮಕ್ಕಳ ಪೋಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

 ಬೆಂಗಳೂರು : ರಾಜ್ಯ ರಾಜಧಾನಿಯ ಹೆಬ್ಬಾಳ ಕೆಂಪಾಪುರದ ಸಿಂಧಿ ಪ್ರೌಢಶಾಲೆಯಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತ ಪಾಠವನ್ನು ಪರಿಚಯಿಸಿರುವುದು ವಿವಾದಕ್ಕೀಡಾಗಿದೆ.

ಶಾಲಾ ಆಡಳಿತ ಮಂಡಳಿಯ ಕ್ರಮಕ್ಕೆ ಮಕ್ಕಳ ಪೋಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಖಾಸಗಿ ಶಾಲಾ ಸಂಘಟನೆ ‘ಕ್ಯಾಮ್ಸ್‌’ ಈ ಸಂಬಂಧ ಸಿಬಿಎಸ್‌ಇ ಮಂಡಳಿಗೆ ದೂರು ನೀಡಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕೆಂದು ಆಗ್ರಹಿಸಿದೆ.

ತಮನ್ನಾ ಪಾಠ ಏಕೆ?:

ಸಿಂಧಿ ಶಾಲೆಯು 7ನೇ ತರಗತಿಯಲ್ಲಿ ಸಿಂಧಿ ಜನಾಂಗದ ಕುರಿತು ಪಾಠವನ್ನು ಪರಿಚಯಿಸಿದೆ. ಇದರಲ್ಲಿ ಸಿಂಧಿ ಜನಾಂಗದವರಾದ ತಮನ್ನಾ ಭಾಟಿಯಾ ಕುರಿತು ಪರಿಚಯ ಸೇರಿಸಲಾಗಿದೆ.

ಆಕ್ಷೇಪ ಏಕೆ?:

ವಯಸ್ಕರು ನೋಡುವ ಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ನಟಿಯ ಬಗ್ಗೆ ಶಾಲಾ ಮಕ್ಕಳಿಗೆ ಪರಿಚಯಿಸುವ ಅಗತ್ಯವೇನಿತ್ತು? ಇದರಿಂದ ಮಕ್ಕಳು ಕಲಿಯಬೇಕಾದ ಮೌಲ್ಯಗಳಾದರೂ ಏನಿದೆ? ಒಂದು ವೇಳೆ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಈ ನಟಿಯ ಬಗ್ಗೆ ಹುಡುಕಾಟ ನಡೆಸಿದರೆ ವಿವಾದಿತ ವಿಚಾರಗಳು, ವಿಡಿಯೋಗಳು ಕೂಡ ಸಿಗುತ್ತವೆ. ಇದನ್ನು ಮಕ್ಕಳು ನೀಡುವ ಅಗತ್ಯವಿದೆಯೇ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಶಾಲೆಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಒತ್ತಾಯ ಪೂರ್ವಕವಾಗಿ ಯಾವುದೇ ವಿಷಯಗಳನ್ನು ಪಠ್ಯದಲ್ಲಿ ಸೇರಿಸುವುದು, ಬೋಧಿಸುವುದು ಮಾಡಬಾರದು. ಮಕ್ಕಳನ್ನು ಬೇರೆ ಸಂಸ್ಕೃತಿಗೆ ಪರಿಚಯಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಇದಕ್ಕೆ ಮುನ್ನ ಸಂಬಂಧಿಸಿದ ಮಂಡಳಿಯ ಅನುಮೋದನೆ ಪಡೆಯಬೇಕು. ತಮನ್ನಾ ಬಾಟಿಯಾ ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿರುವುದನ್ನು ಪ್ರಶ್ನಿಸಿದ ಪೋಷಕರಿಗೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.