ಮುಂಡರಗಿ: ಮಕ್ಕಳಿಗೆ ಶಾಲೆಯಲ್ಲಿ ಸಂಸತ್ ರಚನೆ ಮಾಡುವ ಮೂಲಕ ದೇಶದ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುವ ಮಂತ್ರಿಗಳು ಹಾಗೂ ಕಾರ್ಯ ಕಲಾಪಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.

ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ. ಲಿಂಬಿಕಾಯಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2026- 27ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸತ್ತಿನಲ್ಲಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ವರ್ಷಪೂರ್ತಿ ಜರುಗುವ ಎಲ್ಲ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ ವೈದ್ಯವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾ. ಫಕೀರಸಾಬ್ ಕಲಕೇರಿ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿ, ನೆಲ್ಸನ್ ಮಂಡೇಲಾ ಅವರ ಜೀವನ ಕುರಿತು ಮಕ್ಕಳಿಗೆ ವಿವರಿಸಿ, ಶಾಲಾ ಸಂಸತ್ತು ಎಂದರೇನು? ಅದರ ಕಾರ್ಯಚಟುವಟಿಕೆಗಳ ಕುರಿತು ವಿವರವಾಗಿ ತಿಳಿಸಿದರು.

ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ ಮಾತನಾಡಿ, ಮಕ್ಕಳು ಪ್ರತಿದಿನ ಮಗ್ಗಿ ಹೇಳುವುದನ್ನು ರೂಢಿಸಿಕೊಳ್ಳಬೇಕು. ಬೇಗ ಮಲಗಿ, ಬೇಗ ಏಳುವ ಮೂಲಕ ದೇಶದ ಗುರುಕುಲ ವ್ಯವಸ್ಥೆಯನ್ನು ಅರಿತು ಗುರುಗಳು ಹೇಳುವ ಮಾತುಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಪ್ರಸ್ತುತ ವರ್ಷದ ಎಸ್ಎಸ್ಎಲ್‌ಸಿ ಮಕ್ಕಳಿಗೆ ಗ್ರಾಫ್ ಪುಸ್ತಕಗಳನ್ನು ಕೊಡಮಾಡಿದರು.


ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅವರು, ಶಾಲಾ ಸಂಸತ್ ಸದಸ್ಯರಿಗೆ ಬ್ಯಾಡ್ಜ್ ನೀಡುವ ಮೂಲಕ ಮಾತನಾಡಿ, ಇಂದಿನ ಮಕ್ಕಳು ಈ ದೇಶದ ಸಂಪತ್ತು. ಅವರು ಶಾಲೆಯಿಂದಲೇ ದೇಶದ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮುಂದಾಗಬೇಕು ಎಂದರು.

ಅಧ್ಯಕ್ಷರ ಪರವಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ ಮಾತನಾಡಿ, ಮಕ್ಕಳಿಗೆ 12ನೇ ಶತಮಾನದ ಬಸವಣ್ಣನವರ ಸಂಸತ್ ಕಲ್ಪನೆಯನ್ನು ತಿಳಿಸಿ, ಶಾಲಾ ಸಂಸತ್ತಿನ ಸದಸ್ಯರು ಶಾಲೆಯಲ್ಲಿ ಜರುಗಲಿರುವ ವಿವಿಧ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ₹10 ಸಾವಿರ ಅನುದಾನವನ್ನು ಬಿಡುಗಡೆ ಮಾಡುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು.

ಸಂಸ್ಥೆಯ ಸದಸ್ಯೆ ಎಸ್.ವೈ. ನಾಡಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ ಪಡೆದ ಪತ್ರಕರ್ತ ಕವಿ ಬಂಕಾಪೂರ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು 10 ವಿದ್ಯಾರ್ಥಿಗಳು ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆ.ಎಸ್. ಅಳವಂಡಿ ಉಪಸ್ಥಿತರಿದ್ದರು. ಸಿ.ವಿ. ಪಾಟೀಲ ಸ್ವಾಗತಿಸಿದರು. ಶಿಕ್ಷಕ ಟಿ.ಬಿ. ಕಳಕರೆಡ್ಡಿ ನಿರೂಪಿಸಿದರು. ಎಂ.ಬಿ. ನಾಗರಳ್ಳಿ ವಂದಿಸಿದರು.