ಪಾಶ್ಚಿಮಾತ್ಯರ ಅಂಧಾನು ಕರಣೆ, ಅದೇ ಶ್ರೇಷ್ಠ ಎಂದು ತಿಳಿದ ಯುವ ಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಧರ್ಮದ ಕುರಿತ ಪಾಠಗಳು ಪಠ್ಯಕ್ರಮದಲ್ಲಿ ಬರುವ ಅವಶ್ಯಕತೆ ಇದೆ ಎಂದು ಕೇಂದ್ರ ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸ ಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪಾಶ್ಚಿಮಾತ್ಯರ ಅಂಧಾನು ಕರಣೆ, ಅದೇ ಶ್ರೇಷ್ಠ ಎಂದು ತಿಳಿದ ಯುವ ಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಧರ್ಮದ ಕುರಿತ ಪಾಠಗಳು ಪಠ್ಯಕ್ರಮದಲ್ಲಿ ಬರುವ ಅವಶ್ಯಕತೆ ಇದೆ ಎಂದು ಕೇಂದ್ರ ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸ ಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.ನಗರದ ಕಟಪಟ್ಟಿ ಬವವಣ್ಣ ದೇವಸ್ಥಾನ ಆವರಣದಲ್ಲಿ ಭಾನುವಾರ ರಂಭಾಪುರಿ ಪೀಠದ ಶರನ್ನವರಾತ್ರಿ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಧರ್ಮ ಅಂದರೆ ಉತ್ತಮ ನಡತೆ, ಸನಾತನದಲ್ಲಿ ಪಿತೃಧರ್ಮ, ಮಾತೃಧರ್ಮ, ಆಚಾರ್ಯಧರ್ಮ, ಪುತ್ರಧರ್ಮ, ಸತಿ ಧರ್ಮ ಹೀಗೆ ಯತಿಧರ್ಮ ಹೀಗೆ ಧರ್ಮಕ್ಕೆ ವಿಶಿಷ್ಠ ಸ್ಥಾನ ಮಾನವಿದೆ. ಕೆಟ್ಟ ಕೆಲಸ ಮಾಡಿದವರನ್ನು ಇದು ಧರ್ಮವಲ್ಲ ಎಂದು ಹೇಳುವ ಸಂಪ್ರದಾಯ ಇದೆ. ಆದರೆ ಜ್ಯಾತ್ಯತೀತರಿಗೆ ಇದರ ಸಂಪೂರ್ಣ ತಿಳಿವಳಿಕೆ ಇಲ್ಲದ ಕಾರಣ ಪಾಶ್ಚಿಮಾತ್ಯ ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಸನಾತನ ಸಂಸ್ಕೃತಿಯ ಹಿನ್ನಡೆಗೆ ಕಾರಣವಾಗಿದೆ ಎಂದರು.

ರಂಭಾಪುರಿ ಪೀಠದ ಐತಿಹಾಸಿಕ ಪರಂಪರೆ ಹಾಗೂ ಶಿದ್ದೇಶ್ವರ ಸ್ವಾಮಿಗಳು ಮುಂತಾದ ಧರ್ಮಾಚಾರ್ಯರ ಕುರಿತು ಶಾಲೆಯ ಪಠ್ಯಕ್ರಮದಲ್ಲಿ ಪಾಠಗಳಿಲ್ಲ. ಅದನ್ನು ಹಾಕಲು ಜ್ಯಾತ್ಯತೀತ ವ್ಯವಸ್ಥೆ ಒಪ್ಪುವುದಿಲ್ಲ. ಅದನ್ನು ಜಾತ್ಯತೀತೆ ವಿರೋಧ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮಾನವೀಯ ಮೌಲ್ಯಗಳ ಅಧಪಥನವಾಗುತ್ತಿದೆ. ತಂದೆ-ತಾಯಿ, ಪಾಲಕರ ಅಂತ್ಯಸಂಸ್ಕಾರಕ್ಕೆ ಬರದಂಥ ಮಕ್ಕಳು ಹುಟ್ಟುತ್ತಿದ್ದಾರೆ. ಸನಾತನ ಭವ್ಯ ಪರಂಪರೆ, ಸಂಸ್ಕೃತಿ ಹೇಳಿಕೊಡುವ ಅಜ್ಜ-ಅಜ್ಜಿಗಳಿಲ್ಲದೆ ಮೊಬೈಲ್‌ ಗೀಳಿನಿಂದಾಗಿ ಮಕ್ಕಳಲ್ಲಿ ಸಂಸ್ಕಾರ ಇಲ್ಲವಾಗಿದೆ. ಧರ್ಮವಿಲ್ಲದ ಶಿಕ್ಷಣ ಪದ್ಧತಿಯಿಂದ ಯಡಪಂಥೀಯ ಸಿದ್ಧಾಂತ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನು ಕರಣೆಯಿಂದಾಗಿ ಮಾನವೀಯ ಮೌಲ್ಯಗಳು ಕುಸಿದು ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ಜಗದೀಶ ಗುಡಗುಂಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಬನಹಟ್ಟಿಯ ಶರಣ ಬಸವ ಸ್ವಾಮೀಜಿ, ಕೊಣ್ಣೂರು ವಿಶ್ವಪ್ರಭು ಸ್ವಾಮಿಗಳು, ಯಡಿಯೂರು ರೇಣುಕ ಶಿವಾಚಾರ್ಯರು, ಮಳಲಿಮಠ ನಾಗಭೂಷಣ ಶಿವಾಚಾರ್ಯರು, ದೇವರ ಹಿಪ್ಪರಗಿ ಜಡಿ ಸಿದ್ದೇಶ್ವರ ಸ್ವಾಮಿಗಳು, ಅಂಬಾಜೋಗಾಯಿ ಶ್ರೀಗಳು, ಮುಂತಾದವರಿದ್ದರು.