ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ ₹24,500 ಕೋಟಿ ಬಳಕೆಯಾಗಲಿ: ಎಸ್.ಆರ್. ಹಿರೇಮಠ

| Published : Apr 13 2024, 01:02 AM IST

ಸಾರಾಂಶ

ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೆಎಂಇಆರ್‌ಸಿಯಲ್ಲಿರುವ ₹24,500 ಕೋಟಿ ಬಳಕೆ ಮಾಡಬೇಕು.

ಹೊಸಪೇಟೆ: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೆಎಂಇಆರ್‌ಸಿಯಲ್ಲಿರುವ ₹24,500 ಕೋಟಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಪ್ರೇರಿತವಾಗಿ ಇತರೆ ಪ್ರದೇಶಗಳಿಗೆ ಈ ಹಣ ವಿನಿಯೋಗ ಮಾಡಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಸುಪ್ರೀಂ ಕೋರ್ಟ್‌ ನೇಮಿಸಿದ ಉನ್ನತಾಧಿಕಾರ ಪ್ರಾಧಿಕಾರದ ಮುಖ್ಯಸ್ಥ ನ್ಯಾ.ಬಿ.ಸುದರ್ಶನ ರೆಡ್ಡಿ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಈಗಾಗಲೇ ಅನುಮತಿಸಿದ ಕಾಮಗಾರಿಗಳನ್ನು ಪರಿಶೀಲಿಸಿ, ಅಗತ್ಯ ಕಾಮಗಾರಿಗಳ ಹೊರತು ಉಳಿದವನ್ನು ಪರಿಶೀಲಿಸಿ ಅನುಮತಿಸುವ ಹಾಗೂ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಣಿಯಾಗಬೇಕು ಎಂದರು.

ಬಳ್ಳಾರಿ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಹಿಂದೆ ನಡೆದ ಅಕ್ರಮ ಗಣಿಗಾರಿಕೆಯಿಂದ ಜೀವ ವೈವಿಧ್ಯ ಹಾಗೂ ಪರಿಸರ ಹಾಗೂ ಜನ ಜೀವನ ತತ್ತರಿಸಿದೆ. ಇದರ ಪುನಶ್ಚೇತನಕ್ಕಾಗಿ ಸಮಗ್ರ ಯೋಜನೆ ರೂಪಿಸಬೇಕಿದೆ. ಈಗಾಗಲೇ ಈ ನಾಲ್ಕು ಜಿಲ್ಲಾಡಳಿತಗಳು ಸಲ್ಲಿಸಿದ ಯೋಜನೆಗಳನ್ನು ಮೂರು ಬಾರಿ ರದ್ದುಪಡಿಸಲಾಗಿದೆ. ಮೊದಲು ಪರಿಸರ ಪುನಶ್ಚೇತನಕ್ಕಾಗಿ ಸಮೀಕ್ಷೆ ನಡೆಯಬೇಕು. ದುರ್ಬಲರ ಕಲ್ಯಾಣಕ್ಕೆ ಕ್ರಮವಹಿಸಬೇಕು. ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಆಗಬೇಕಿದೆ. ರಕ್ತಹೀನತೆ, ಅಸ್ತಮಾದಿಂದ ಬಳಲುತ್ತಿರುವ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸಗಳು ನಡೆಯಬೇಕು. ಆದರೆ, ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಬರೀ ಕಟ್ಟಡ ನಿರ್ಮಾಣದ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುತ್ತಿರುವುದು ಸರಿಯಲ್ಲ ಎಂದರು.

ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಮರುಸ್ಥಾಪನೆ, ರಸ್ತೆ, ಮೂಲಸೌಕರ್ಯ, ಕೃಷಿ, ಕೃಷಿ ಪೂರಕ, ಆರೋಗ್ಯ, ಪೌಷ್ಟಿಕ ಆಹಾರ, ಕೌಶಲ್ಯ, ಗೃಹ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿ ಒಳಗೊಂಡಂತೆ ಸಮುದಾಯ, ಗಣಿಭಾದಿತ ಪ್ರೇಶದ ಜನ, ಅದರಲ್ಲೂ ಬಡವರು, ಮಹಿಳೆಯರು, ಕಾರ್ಮಿಕರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಬೇಕು. ಈ ಯೋಜನೆಗಳನ್ನು ಅನುಮೋದನೆ ಪಡೆದು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಸರ್ಕಾರದ ಇತರೆ ಯೋಜನೆಗಳಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಬರೀ ₹2 ಲಕ್ಷ ಇಡಲಾಗಿದೆ. ಆದರೆ, ಈ ಕೆಎಂಇಆರ್‌ಸಿ ಯೋಜನೆಯಲ್ಲಿ ಬರೋಬ್ಬರಿ ₹7 ಲಕ್ಷ ಇಡಲಾಗಿದೆ. ಸರ್ಕಾರಿ ಅನುದಾನ ದೊರೆಯುವ ಕಟ್ಟಡಗಳಿಗೂ ಕೆಎಂಇಆರ್‌ಸಿ ಅಡಿಯಲ್ಲೇ ಅನುಮೋದನೆ ಪಡೆಯಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇಂತಹ ಲೋಪಗಳು ಮರುಕಳಿಸಬಾರದು. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕಟಿಬದ್ಧರಾಗುವ ಯೋಜನೆಗಳನ್ನು ರೂಪಿಸಬೇಕು ಎಂದರು.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ರೆಡ್ಡಿ ಅವರನ್ನು ಪ್ರಧಾನಿ ಮೋದಿ, ಗೃಹಸಚಿವ ಅಮಿತ್‌ ಶಾ ಸೇರ್ಪಡೆ ಮಾಡಿಕೊಂಡಿರುವುದು ಸರಿಯಲ್ಲ. ಅರವಿಂದ ಕೇಜ್ರಿವಾಲ್‌ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸುತ್ತಾರೆ. ಆದರೆ ಗಣಿ ಹಗರಣದ ಆರೋಪ ಹೊತ್ತಿರುವವರನ್ನು ಅಪ್ಪಿಕೊಳ್ಳುವುದು ಯಾವ ನ್ಯಾಯ? ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಹೇರಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಬಾಂಡ್‌ ಮೂಲಕ ನಷ್ಟದಲ್ಲಿರುವ ಕಂಪನಿಗಳಿಂದಲೂ ದೇಣಿಗೆ ಪಡೆಯಲಾಗಿದೆ. ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು. ಸುಪ್ರೀಂ ಕೋರ್ಟ್‌ ನೇತೃತ್ವದಲ್ಲೇ ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿದರೆ ಇಡೀ ಪ್ರಕರಣದ ಹೂರಣ ಬಯಲಾಗಲಿದೆ ಎಂದರು.

ಜನಸಂಗ್ರಾಮ ಪರಿಷತ್‌ನ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಣದಲ್ಲಿ ಯಾವುದೇ ವ್ಯತ್ಯಾಸ ಆಗಂದತೆ ಕಾವಲುನಾಯಿಯಂತೆ ಜನಸಂಗ್ರಾಮ ಪರಿಷತ್‌ ಕೆಲಸ ಮಾಡಲಿದೆ. ಈಗಾಗಲೇ ಗಣಿಬಾಧಿತ ಪ್ರದೇಶಗಳ ಜನರ ಜೊತೆಗೂಡಿ ಪರಿಸರ ಪುನಶ್ಚೇತನಕ್ಕಾಗಿ ಕೆಲಸ ಮಾಡಲಾಗುತ್ತಿದೆ. ಪರಿಸರ ಪುನಶ್ಚೇತನಕ್ಕಾಗಿ ಮೊದಲು ಸರ್ವೇ ನಡೆಯಬೇಕು ಎಂದರು.

ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಟಿ.. ಎಂ.‌ ಶಿವಕುಮಾರ, ಜೆ.ಎಂ.‌ಸಿಂಹ ಇದ್ದರು.