ಕನ್ನಡ ನಾಡು ಹಾಗೂ ಭಾಷೆಗೆ ಅಪಾರ ಕೊಡುಗೆ ನೀಡಿರುವ ರಾಷ್ಟ್ರಕವಿ ಕುವೆಂಪು ಅವರ ಈಗಿರುವ ಪ್ರತಿಮೆ ಜಾಗದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುವಂತಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಕುವೆಂಪು ಕುಟುಂಬದ ಸಂಬಂಧಿಕರಾದ ಕೆ.ಪಿ. ಚಂದ್ರಕಲಾ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ನಾಡು ಹಾಗೂ ಭಾಷೆಗೆ ಅಪಾರ ಕೊಡುಗೆ ನೀಡಿರುವ ರಾಷ್ಟ್ರಕವಿ ಕುವೆಂಪು ಅವರ ಈಗಿರುವ ಪ್ರತಿಮೆ ಜಾಗದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುವಂತಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಕುವೆಂಪು ಕುಟುಂಬದ ಸಂಬಂಧಿಕರಾದ ಕೆ.ಪಿ. ಚಂದ್ರಕಲಾ ಆಗ್ರಹಿಸಿದರು. ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಸೋಮವಾರ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿ ಕುವೆಂಪು ಅವರ ದೊಡ್ಡ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು. ಕುವೆಂಪು ಅವರ ಮಂತ್ರ ಮಾಂಗಲ್ಯ ಸರಳ ವಿವಾಹವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕು ಕಾಣಬಹುದು. ಕುವೆಂಪು ಅವರ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಸೇರಿದಂತೆ ಹಲವು ಕೃತಿಗಳನ್ನು ಅಧ್ಯಯನ ಮಾಡಬೇಕು. ಮುಂದಿನ ಬಾರಿ ಕುಶಾಲನಗರದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಕೆ.ಪಿ. ಚಂದ್ರಕಲಾ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಸಂದೇಶ ಇಡೀ ಮಾನವ ಜಗತ್ತಿಗೆ ಕನ್ನಡಿ ಹಿಡಿದಿದೆ.

ಕುವೆಂಪು ಅವರ ಕಾದಂಬರಿಗಳು, ಬರಹ, ಸಾಹಿತ್ಯ, ಕವನಗಳು ಇಡೀ ಮಾನವ ಕುಲದ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಸಹಕಾರಿಯಾಗಿದೆ. ಅವರ ಶ್ರೇಷ್ಠ ಗ್ರಂಥ ರಾಮಾಯಣ ದರ್ಶನಂ ವಿವಿಧ ಆಯಾಮಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕುವೆಂಪು ಅವರು ಮೌಢ್ಯ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ್ದಾರೆ. ಕಾನೂರು ಹೆಗ್ಗಡತಿ ಕೃತಿಯಲ್ಲಿ ಮಲೆನಾಡಿನ ಚಿತ್ರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ ಎಂಬುದನ್ನು ಸಾರಿದ್ದಾರೆ ಎಂದರು.

ಕುವೆಂಪು ಅವರ ಕೃತಿಗಳು ಒಂದೊಂದು ಹಾಡು ಭಾವಗೀತೆಯಾಗಿದೆ. ಬೆರಳ್ಗೆ ಕೊರಳ್ ಸೇರಿದಂತೆ ಹಲವು ನಾಟಕಗಳನ್ನು ಬರೆಯುವ ಮೂಲಕ ಕನ್ನಡ ನಾಡಿನ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿದ್ದು, ಕುವೆಂಪು ಅವರ ಪರಿಕಲ್ಪನೆಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಯುಗದ ಕವಿ, ಜಗದ ಕವಿ, ರಸ ಋಷಿಗಳ ಕವಿಯಾಗಿದ್ದು, ಕನ್ನಡ ಸಾಹಿತ್ಯ ಲೋಕದ ವಿಸ್ಮಯ. ಜಾತಿ, ಧರ್ಮ, ಪಂಥಗಳನ್ನು ಬಿಟ್ಟು ಎಲ್ಲರೂ ವಿಶ್ವ ಪಥದಲ್ಲಿ ಸಾಗಬೇಕು ಎಂದು ಹೇಳಿದ್ದಾರೆ. ನವಿಲು, ಪಕ್ಷಿಕಾಶಿ, ಶೂದ್ರ ತಪಸ್ವಿ, ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದು, ಕುವೆಂಪು ಅವರಿಗೆ ಪ್ರಶಸ್ತಿಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿವೆ ಎಂದು ಹೇಳಿದರು.

ಬೊಮ್ಮನಹಳ್ಳಿಯ ಕಿಂದರಿಜೋಗಿ ಮಕ್ಕಳ ಮನಸ್ಸಿನಲ್ಲಿ ಉಳಿದಿವೆ. ಈ ಕೃತಿಯಲ್ಲಿ ವ್ಯಕ್ತಿತ್ವವನ್ನು ಕತೆಯಲ್ಲಿ ರೂಪಿಸಿದ್ದಾರೆ. ಮಲೆನಾಡಿನ ಚಿತ್ರಣ, ನಿಸರ್ಗದ ಪ್ರೇಮ ಸಾರಿದ್ದಾರೆ. ಕುವೆಂಪು ಅವರ ಒಂದೊಂದು ಕೃತಿಯು ಕೂಡ ಒಂದೊಂದು ಅನುಭವವಾಗಿದೆ ಎಂದು ವಿವರಿಸಿದರು.

ಪ್ರಮುಖರಾದ ಎಚ್.ಎಲ್. ದಿವಾಕರ ಮಾತನಾಡಿ ಕುವೆಂಪು ಅವರ ಪ್ರತಿಮೆ ಇರುವ ಜಾಗವನ್ನು ಉದ್ಯಾನವನ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ಮಾಡಿದರು.

ಮೋಹನ್ ಮೌರ್ಯ ಮಾತನಾಡಿ, ಕುವೆಂಪು ಅವರ ಆದರ್ಶ ಹಾಗೂ ಆಶಯಗಳನ್ನು ಅವರ ಬರಹಗಳ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ .ಚಂಗಪ್ಪ, ಸಾಹಿತಿ ಉ.ರಾ. ನಾಗೇಶ್ ಇದ್ದರು.

ಶಿಕ್ಷಕಿ ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಡಿಸಿಸಿ ಬ್ಯಾಂಕ್ ಬಳಿ ಇರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ನಗರಸಭೆ ಅಧ್ಯಕ್ಷರಾದ ಪಿ. ಕಲಾವತಿ, ತಹಸೀಲ್ದಾರ್ ಶ್ರೀಧರ, ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ಕೇಶವ ಕಾಮತ್, ಲಯನ್ಸ್‌ ಅಧ್ಯಕ್ಷರಾದ ಮದನ್, ಅಂಬೆಕಲ್ಲು ನವೀನ್, ಪೌರಾಯುಕ್ತ ಎಚ್.ಆರ್. ರಮೇಶ್, ಆರ್.ಪಿ. ಚಂದ್ರಶೇಖರ್, ಮೋಹನ್ ಕುಮಾರ್ ಮತ್ತಿತರರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿಯರು, ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದ್ದರು.