ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಶೀಘ್ರದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಶೀಘ್ರದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ವಡಕರಾಯ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಪಾದಗಟ್ಟೆ ಆಂಜನೇಯ ದೇವಾಲಯ, ಮೇನ್‌ ಬಜಾರ, ಮಹಾತ್ಮ ಗಾಂಧಿ ವೃತ್ತ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣ ಮಾರ್ಗವಾಗಿ ಪುನೀತ್‌ ರಾಜಕುಮಾರ ವೃತ್ತದಿಂದ ತಹಸೀಲ್ದಾರ್‌ ಕಚೇರಿ ಎದುರು ಬೃಹತ್‌ ಪ್ರತಿಭಟನಾ ರ‍್ಯಾಲಿಯಾಗಿ ಮಾರ್ಪಟ್ಟಿತ್ತು.

ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ವಾರ್ಷಿಕ 5 ಲಕ್ಷ ಟನ್‌ ಕಬ್ಬು ಬೆಳೆಯಲಾಗುತ್ತಿದೆ. 2015ರಲ್ಲೇ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಬಂದ್‌ ಮಾಡಲಾಗಿದೆ. ರೈತರು ಹಲವು ಬಾರಿ ಹೋರಾಟ ನಡೆಸಿ, ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದಕ್ಕೆ ಇದುವರೆಗೂ ಮುಂದಾಗುತ್ತಿಲ್ಲ. ಬರೀ ಭರವಸೆಗಳನ್ನೇ ನೀಡಲಾಗುತ್ತಿದೆಯೇ ಹೊರತು ರೈತರ ಬೇಡಿಕೆಗಳನ್ನು ಈಡೇರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದರಿಂದ ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ರೈತರು ಮೈಲಾರ ಮತ್ತು ದುಗ್ಗಾವತ್ತಿ, ಮುಂಡರಗಿ, ಸಿರುಗುಪ್ಪ ಈ ಪ್ರದೇಶಗಳಿಗೆ ಕಬ್ಬು ಸರಬರಾಜು ಮಾಡುವಂತಾಗಿದೆ. ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಣೆ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಇಲ್ಲೇ ಸ್ಥಾಪನೆಯಾದರೆ ಸಾಗಣೆ ವೆಚ್ಚದ ಹೊರೆ ಕಡಿಮೆ ಆಗಲಿದೆ. ಈ ಭಾಗದಲ್ಲಿ 5 ಲಕ್ಷ ಟನ್‌ ಕಬ್ಬು ಬೆಳೆಯುವ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ತುಂಬಾ ಅನುಕೂಲವಾಗಲಿದೆ. ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಸೂಕ್ತ ಸ್ಥಳವನ್ನು ಗುರುತಿಸಿ ಭೂಮಿಪೂಜೆ ಮಾಡಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಶ್ರುತಿ ಎಂ. ಮಳ್ಳಪ್ಪಗೌಡ್ರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು. ಹದಿನೈದು ದಿನದೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ನೇತೃತ್ವದಲ್ಲಿ ಸಭೆ ನಡೆಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಬೇರ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ಮಂಜುನಾಥ, ಬೀನಾ ರೂಪಾ, ರೇಖಾ, ಕಲಾವತಿ, ರತ್ನಮ್ಮ, ಬಸಣ್ಣ, ಯಲ್ಲಪ್ಪ ಇದ್ದರು.