ಅಹಲ್ಯಾಬಾಯಿ ಕೊಡುಗೆ ಸಮಾಜ ಸೇವೆಗೆ ಪ್ರೇರಣೆಯಾಗಲಿ: ರವೀಂದ್ರಜಿ

| Published : Jan 14 2025, 01:05 AM IST

ಸಾರಾಂಶ

ನಮ್ಮ ಸಂಸ್ಕೃತಿ ಬೆಳೆಸುವ, ಜನರನ್ನ ಒಗ್ಗೂಡಿಸುವುದು ತೀರ್ಥಯಾತ್ರೆ, ಅಂತಹ ತೀರ್ಥಕ್ಷೇತ್ರಗಳನ್ನ ಅಭಿವೃದ್ಧಿ ಮಾಡಿ ದೇಶದ ಉದ್ದಗಲಕ್ಕೂ ತಮ್ಮ ಉತ್ತಮ ಕೆಲಸ ಮೂಲಕ ಅಜಾರಾಮರವಾದ ರಾಜಮಾತೆಯ ಕಾರ್ಯ ಅನುಕರಣೀಯ.

ಗೋಕರ್ಣ: ರಾಣಿ ಅಹಲ್ಯಾ ಮಾತೆ ರಾಷ್ಟ್ರೀಯತೆಗೆ ಕೊಟ್ಟ ಕೊಡುಗೆ ಸಮಾಜ ಸೇವೆಗೆ ಪ್ರೇರಣೆಯಾಗಬೇಕು. ಆ ಮೂಲಕ ರಾಷ್ಟ್ರ ಹಿತದ ಕಾರ್ಯ ನಿರಂತರ ನಡೆಯಬೇಕು ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರಜಿ ತಿಳಿಸಿದರು.

ಭಾನುವಾರ ಸಂಜೆ ಇಂದೂರ ರಾಣಿ ಅಹಲ್ಯಾಬಾಯಿ ಹೊಳ್ಕರ ಅವರ ಜನ್ಮ ತ್ರಿಶತಮಾನೋತ್ಸವದ ಅಂಗವಾಗಿ ಮುಖ್ಯ ಕಡಲತೀರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಂಸ್ಕೃತಿ ಬೆಳೆಸುವ, ಜನರನ್ನ ಒಗ್ಗೂಡಿಸುವುದು ತೀರ್ಥಯಾತ್ರೆ, ಅಂತಹ ತೀರ್ಥಕ್ಷೇತ್ರಗಳನ್ನ ಅಭಿವೃದ್ಧಿ ಮಾಡಿ ದೇಶದ ಉದ್ದಗಲಕ್ಕೂ ತಮ್ಮ ಉತ್ತಮ ಕೆಲಸ ಮೂಲಕ ಅಜಾರಾಮರವಾದ ರಾಜಮಾತೆಯ ಕಾರ್ಯ ಅನುಕರಣೀಯ ಎಂದರು.

ಎಂಟನೇ ವಯಸ್ಸಿನಿಂದ ೫೮ ವರ್ಷದವರೆಗೂ ನಿರಂತರವಾಗಿ ಕಷ್ಟದ ಸರಮಾಲೆಯನ್ನು ಎದುರಿಸಿದರೂ ತನ್ನ ರಾಜ್ಯ ಹಾಗೂ ದೇಶದ ಹಿತ ಕಾಪಾಡುವಲ್ಲಿ ಅಹಲ್ಯಾಬಾಯಿಯವರ ಸಾಧನೆ ಅನುಕರಣೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಹಲ್ಯಾಬಾಯಿ ಹೊಳ್ಕರ ಜನ್ಮ ತ್ರಿಶತಮಾನೋತ್ಸವ ಸಮಿತಿ ಅಧ್ಯಕ್ಷ ವಿದ್ವಾನ ಗಣೇಶ್ವರ ದೀಕ್ಷಿತ ಮಾತನಾಡಿ, ಸನಾತನ ಪದ್ಧತಿಯ ಉಳಿವು, ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಮಹಾಮಾತೆ, ಇಲ್ಲಿಯೂ ಧರ್ಮಛತ್ರ ನಿರ್ಮಿಸಿ ಸದಾ ಸ್ಮರಣೀಯ ಕಾರ್ಯ ಮಾಡಿದ್ದಾರೆ ಎಂದರು.

ರಾಷ್ಟ್ರ ಸೇವಿಕಾ ಸಮಿತಿಯ ವೇದಾ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀದೇವಿ ಭಟ್ ನಿರ್ವಹಿಸಿದರು. ಸುವರ್ಣಾ ಪ್ರಸಾದ ವಂದಿಸಿದರು. ಪ್ರಾರಂಭದಲ್ಲಿ ಉಷಾ ಹೆಗಡೆ ರಚಿಸಿದ ಅಹಲ್ಯಾಬಾಯಿಯವರ ಚರಿತ್ರೆ ಕುರಿತ ಗೀತೆಯನ್ನು ಗಾಯತ್ರಿ ಅಂಬಿಗ ಹಾಡಿದರು. ಎರಡೂವರೆ ಶತಮಾನದ ಹಿಂದೆ ಇಲ್ಲಿನ ರಥಬೀದಿಯಲ್ಲಿ ರಾಣಿ ಅಹಲ್ಯಾಬಾಯಿಯವರು ಭಕ್ತರಿಗಾಗಿ ನಿರ್ಮಿಸಿದ ಛತ್ರದಲ್ಲಿರುವ ಶ್ರೀರೇವಾಳೇಶ್ವರ ದೇವರಿಗೆ ಹಾಗೂ ಅಹಲ್ಯಾಬಾಯಿ ಮೂರ್ತಿಗೆ ವೇದ ವಿದ್ವಾಂಸರಿಂದ ವಿಶೇಷ ಪೂಜೆ ನೆರವೇರಿತು. ನಂತರ ಅಹಲ್ಯಾಬಾಯಿಯವರ ಜೀವನ ಸಾಧನೆಯ ತಿಳಿಸುವ ಚಿತ್ರಲೋಕ ಪ್ರಿಯದರ್ಶಿನಿಯನ್ನು ರಾಷ್ಟ್ರ ಸೇವಿಕಾ ಸಮಿತಿಯ ವೇದಾ ಕುಲಕರ್ಣಿ, ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ಉದಯ ಮಯ್ಯರ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿಮೂಳೆ ಪುಷ್ಪಾರ್ಚನೆ ಮೂಲಕ ಅನಾವರಣ ಮಾಡಿದರು. ಸಂಜೆ ಅಹಲ್ಯಾ ಬಾಯಿ ಹೊಳ್ಕರ ಛತ್ರದಿಂದ ಆಕರ್ಷಕ ಶೋಭಾಯಾತ್ರೆ ಊರಿನ ಪ್ರಮುಖ ಬೀದಿಯಲ್ಲಿ ಸಾಗಿ ಮುಖ್ಯಕಡಲತೀರಕ್ಕೆ ತೆರಳಿ ಕೊನೆಗೊಂಡಿತು. ಜನ್ಮ ತ್ರಿಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷೆ ಚಂದ್ರಮತಿ ಸಭಾಹಿತ, ಕಾರ್ಯದರ್ಶಿ ಮಹೇಶ ನಾಯ್ಕ ತದಡಿ, ಸದಸ್ಯರಾದ ಚಂದ್ರಶೇಖರ ಬುಗ್ದೆ, ಡಾ. ಶೀಲಾ ಹೊಸ್ಮನೆ, ಮಹೇಶ ಶೆಟ್ಟಿ, ನಾಗೇಶ ಗೌಡ, ಜಗದೀಶ ಅಂಬಿಗ, ಗೋವಿಂದ ಗೌಡ, ಉಳಿದ ಸದಸ್ಯರು, ಗಣಪತಿ ಅಡಿ, ರವಿ ಗುನಗಾ ಇತರರು ಇದ್ದರು.