ಎಲ್ಲ ಧಾರ್ಮಿಕ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ; ಮೌಲಾನಾ ಶಾಫಿ ಸ‌ಅದಿ

| Published : May 15 2024, 01:39 AM IST

ಎಲ್ಲ ಧಾರ್ಮಿಕ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ; ಮೌಲಾನಾ ಶಾಫಿ ಸ‌ಅದಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಶಾಂತಿಗಾಗಿ ಔಲಿಯಾಗಳ ಸನ್ನಿದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಖತ್ಮುಲ್ ಕುರ್‌ಆನ್ ಸಮರ್ಪಣೆ, ಬೆಲ್ಲದ ಗಂಜಿ ವಿತರಣೆ, ದಿಡುಪೆ ಯಂಗ್ ಮೆನ್ಸ್ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ತಂಪು ಪಾನೀಯ ವಿತರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಜಕೀಯ ಉದ್ದೇಶಕ್ಕಾಗಿ ಯುವಜನರನ್ನು ಪ್ರಚೋದಿಸುವ ಕಾರ್ಯ ಕೆಲ ಸ್ವಾರ್ಥ ರಾಜಕಾರಣಿಗಳಿಂದ ಆಗುತ್ತಿದೆ. ಅಂಥರಿಂದ ಹಿಂದೂ ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು. ಧರ್ಮದ ಅನುಷ್ಠಾನ ಮತ್ತು ಪರ ಧರ್ಮದ ಮೇಲಿನ ಗೌರವ ಪಾಲಿಸೋಣ. ಆ ನಿಟ್ಟಿನಲ್ಲಿ ಎಲ್ಲ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸ‌ಅದಿ ಹೇಳಿದರು.

ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಸುಮಾರು 800 ವರ್ಷಗಳಿಗೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ನಾಡಿನ ಸರ್ವ ಧರ್ಮೀಯ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನ 2024ನೇ ಸಾಲಿನ ಉರೂಸ್ ಪ್ರಯುಕ್ತ ಭಾನುವಾರ ನಡೆದ ಸರ್ವಧರ್ಮೀಯ ಸೌಹಾರ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ವಹಿಸಿದ್ದರು. ಪ್ರಮುಖ ಧಾರ್ಮಿಕ ಸಂದೇಶ ನೀಡಿದ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮುರಳಿಕೃಷ್ಣ ಇರ್ವತ್ರಾಯ ಅವರು, ಸಾಮರಸ್ಯ ಮತ್ತು ಭಾವೈಕ್ಯತೆ ಭಾರತದ ಹೆಗ್ಗುರುತು. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ, ಕಾಜೂರು ಕ್ಷೇತ್ರ, ಕ್ರೈಸ್ತ ಧರ್ಮದ ಡಯಾಸಿಸ್ ಕೇಂದ್ರ, ಬಸದಿ ಇತ್ಯಾಧಿ ಗಳಿಂದ ಕೂಡಿದ ನಮ್ಮ ತಾಲೂಕು ಹೆಮ್ಮೆಯ ಕೇಂದ್ರ. ದೇಹ ಅಂದರೆ ಮನುಷ್ಯ. ಮಾನವೀಯತೆ. ಅದೇ ರೀತಿ ದೇಶ ಎಂದರೆ ಭಾರತೀಯತೆ ಎಂಬುದನ್ನು ಅರಿಯೋಣ ಎಂದರು.

ಪ್ರಮುಖ ಸಂದೇಶ ಭಾಷಣಕಾರರಾಗಿದ್ದ ಮೌಲಾನಾ ಅಝೀಝ್ ದಾರಿಮಿ ಮಾತನಾಡಿ, ಎಲ್ಲರಿಗೂ ಒಳಿತನ್ನು ಬಯಸುವುದೇ ನಿಜವಾದ ಧರ್ಮ.‌ ಕೆಡುಕು ಬಯಸುವುದು ಯಾವ ಅರ್ಥದಲ್ಲೂ ಧರ್ಮವಾಗಲು ಸಾಧ್ಯವೇ ಇಲ್ಲ. ನಮ್ಮ ಕೆಡುಕುತನವನ್ನು ಮನಸ್ಸಿನ ಕಲ್ಮಶವನ್ನು ದೂರೀಕರಿಸಿದರೆ ಇನ್ನೊಂದು ಧರ್ಮದ ಒಳಿತು ನಮಗೆ ಅರಿವಾಗುತ್ತದೆ ಎಂದರು.

ಕಾಜೂರು ತಂಙಳ್ ದುಆ ನಡೆಸಿದರು. ವಕ್ಪ್ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಡಾ. ಅಬ್ದುರ್ರಶೀದ್ ಝೈನಿ ಸಖಾಫಿ, ಮಿತ್ತಬಾಗಿಲು ಗ್ರಾ.ಪಂ. ಪಿಡಿಒ ಮೋಹನ್ ಬಂಗೇರ, ಮೈಮೂನ ಫೌಂಡೇಶನ್ ಮುಖ್ಯಸ್ಥ ಆಸಿಫ್ ಆಪದ್ಭಾಂಧವ ಶುಭ ಕೋರಿದರು.

ಸಮಾರಂಭದಲ್ಲಿ ಸಹಕಾರಿ ಧುರೀಣ ಲಕ್ಷ್ಮಣ ಗೌಡ ಬಂಗಾಡಿ, ಯು.ಕೆ. ಮುಹಮ್ಮದ್ ಹನೀಫ್ ಉಜಿರೆ, ನೂರುದ್ದೀನ್ ಸಾಲ್ಮರ, ಹನೀಫ್ ಮಲ್ಲೂರು, ರಹೀಂ ಮಲ್ಲೂರು, ಅಬ್ದುಶ್ಶುಕೂರ್ ಉಜಿರೆ, ಕಾಸಿಂ ಮಲ್ಲಿಗೆಮನೆ, ಬಿ.ಎ. ಯೂಸುಫ್ ಶರೀಫ್, ಇಬ್ರಾಹಿಂ ಮದನಿ, ಕೆ.ಯು. ಉಮರ್ ಸಖಾಫಿ, ಎಚ್‌. ಮುಹಮ್ಮದ್ ವೇಣೂರು, ಸಮದ್ ಸೋಂಪಾಡಿ, ಬಿ.ಎ ನಝೀರ್ ಬೆಳ್ತಂಗಡಿ, ಮುಸ್ತಫ ರೂಬಿ, ಬಶೀರ್ ಸವಣೂರು, ಅಬ್ದುಲ್ ರಝಾಕ್ ಸವಣೂರು, ಸಿರಾಜ್ ಬೈಕಂಪಾಡಿ, ಸೈದುದ್ದೀನ್, ನಾಸಿರ್ ಕುಂಬ್ರ, ಉಮರ್ ಮುಸ್ಲಿಯಾರ್ ಕೇರಿಮಾರ್, ಡಾ. ಆಲ್ಬಿನ್, ಕಬೀರ್ ಕಾಜೂರು, ಝಕರಿಯಾ ಹಾಜಿ ಆತೂರು ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಅಶ್ರಫ್ ಆಲಿಕುಂಞ ಕಾರ್ಯಕ್ರಮ ನಿರ್ವಹಿಸಿದರು.ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ಅಝಿಝ್ ಝಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು ಅತಿಥಿಗಳನ್ನು ಗೌರವಿಸಿದರು.

ವಿಶ್ವ ಶಾಂತಿಗಾಗಿ ಔಲಿಯಾಗಳ ಸನ್ನಿದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಖತ್ಮುಲ್ ಕುರ್‌ಆನ್ ಸಮರ್ಪಣೆ, ಬೆಲ್ಲದ ಗಂಜಿ ವಿತರಣೆ, ದಿಡುಪೆ ಯಂಗ್ ಮೆನ್ಸ್ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ತಂಪು ಪಾನೀಯ ವಿತರಣೆ ನಡೆಯಿತು.

ಕಾರ್ಯಕ್ರಮದುದ್ದಕ್ಕೂ ಜಾತಿ, ಧರ್ಮ ಬೇಧವಿಲ್ಲದೆ ಹಲವಾರು ಮಂದಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿದರು. ಉರೂಸ್ ಪ್ರಯುಕ್ತ ಕಾಜೂರು ಪ್ರದೇಶವನ್ನು‌ ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿತ್ತು.